Home ಟಾಪ್ ಸುದ್ದಿಗಳು ಪ್ರಿಯಾಂಕ್ ಖರ್ಗೆ ವಿರುದ್ಧ ಮಹಿಳಾ ಆಯೋಗಕ್ಕೆ ಎಎಪಿ ದೂರು

ಪ್ರಿಯಾಂಕ್ ಖರ್ಗೆ ವಿರುದ್ಧ ಮಹಿಳಾ ಆಯೋಗಕ್ಕೆ ಎಎಪಿ ದೂರು

ಬೆಂಗಳೂರು: ಯುವತಿಯರು ಸರಕಾರಿ ಕೆಲಸ ಪಡೆಯಲು ಮಂಚ ಹತ್ತಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೈಗೊಳ್ಳಲು ಎಎಪಿ ಆಗ್ರಹಿಸಿದೆ.

ಪ್ರಿಯಾಂಕ್ ಖರ್ಗೆ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಎಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿಯ ಮಹಿಳಾ ಘಟಕವು ರಾಜ್ಯ ಮಹಿಳಾ ಆಯೋಗಕ್ಕೆ ಮನವಿ ಸಲ್ಲಿಸಿತು.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಎಎಪಿಯ ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷೆ ಕುಶಲಸ್ವಾಮಿ, “ಮಾಜಿ ಸಚಿವರಾದ ಪ್ರಿಯಾಂಕ್ ಖರ್ಗೆಯವರು ಆಗಸ್ಟ್ 12, 2022ರಂದು ಕಲಬುರಗಿಯಲ್ಲಿ ಪತ್ರಿಕಾಗೊಷ್ಠಿಯಲ್ಲಿ ಮಾತನಾಡುವಾಗ ಮಹಿಳೆಯರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ಇದು ಲಂಚ-ಮಂಚದ ಸರಕಾರ, ಯುವಕರಿಗೆ ನೌಕರಿ ಬೇಕಂದ್ರೆ ಲಂಚ ಕೊಡಬೇಕು. ಯುವತಿಯರಿಗೆ ನೌಕರಿ ಬೇಕೆಂದರೆ ಮಂಚ ಹತ್ತಬೇಕು ಎನ್ನುವ ಕೀಳು ಹೇಳಿಕೆಯನ್ನು ನೀಡಿದ್ದಾರೆ. ಇದು ಉದ್ಯೋಗಸ್ಥ ಹಾಗೂ ಉದ್ಯೋಗಾಕಾಂಕ್ಷಿ ಮಹಿಳೆಯರಿಗೆ ಮಾಡಿರುವ ಅವಮಾನವಾಗಿದ್ದು, ಮಹಿಳಾ ಆಯೋಗವು ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

“ರಾಜಕೀಯವಾಗಿ ತಮ್ಮ ಬೇಳೆ ಬೇಯಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಕೀಳು ಹೇಳಿಕೆ ನೀಡುವುದು ಹೊಸತೇನಲ್ಲ. ಆದರೆ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಪ್ರಮುಖ ಪಾತ್ರವಹಿಸಿರುವ ರಾಜಕೀಯ ಕುಟುಂಬದ ಕುಡಿಯಾಗಿರುವ ಪ್ರಿಯಾಂಕ್ರವರು ಸರಕಾರಿ ಕೆಲಸ ಪಡೆಯುವ ಎಲ್ಲಾ ಮಹಿಳಾ ಅಭ್ಯರ್ಥಿಗಳ ಮೇಲೆ ಕಪ್ಪು ಚುಕ್ಕೆಯನ್ನು ಬರುವಂತಹ ಈ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯ ತೀವ್ರತೆಯನ್ನು ಗಮನಿಸಿ ರಾಜ್ಯ ಮಹಿಳಾ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು” ಎಂದು ಮಾಧ್ಯಮ ವಕ್ತಾರೆ ಉಷಾ ಮೋಹನ್ ಒತ್ತಾಯಿಸಿದರು.

ಆಮ್ ಆದ್ಮಿ ಪಾರ್ಟಿಯ ಮಹಿಳಾ ಮುಖಂಡರು ಭಾಗವಹಿಸಿದ್ದರು.

Join Whatsapp
Exit mobile version