Home ಟಾಪ್ ಸುದ್ದಿಗಳು ದೆಹಲಿ ಪಾಲಿಕೆಗೆ ಸ್ಥಾಯಿ ಸಮಿತಿ ಚುನಾವಣೆ ನಡೆಯುವ ಮೊದಲೇ ಬಿಜೆಪಿಗೆ ಜಿಗಿದ ಎಎಪಿಯ ಕೌನ್ಸಿಲರ್

ದೆಹಲಿ ಪಾಲಿಕೆಗೆ ಸ್ಥಾಯಿ ಸಮಿತಿ ಚುನಾವಣೆ ನಡೆಯುವ ಮೊದಲೇ ಬಿಜೆಪಿಗೆ ಜಿಗಿದ ಎಎಪಿಯ ಕೌನ್ಸಿಲರ್

ನವದೆಹಲಿ: ಮೊನ್ನೆ ರಾತ್ರಿಯೇ ನಡೆಯಬೇಕಾಗಿದ್ದ ದಿಲ್ಲಿ ಮಹಾನಗರ ಪಾಲಿಕೆಯ ಆರು ಸ್ಥಾಯಿ ಸಮಿತಿಗಳ ಚುನಾವಣೆ ಬಿಜೆಪಿಯವರ ಗಲಾಟೆಯಿಂದಾಗಿ ಮುಂದೂಡಲಾಗಿತ್ತು.


ಈ ಸ್ಥಾಯಿ ಸಮಿತಿಗಳ ಚುನಾವಣೆ ನಡೆಯಬೇಕೆನ್ನುವ ಈ ಹಂತದಲ್ಲಿ ಎಎಪಿಯ ಬವಾನಾ ವಾರ್ಡ್’ನ ಕೌನ್ಸಿಲರ್ ಪವನ್ ಶೆರಾವತ್ ಅವರು ಬಿಜೆಪಿಗೆ ಸೇರಿದ್ದಾರೆ. ಕಳೆದ ಎರಡು ದಿನಗಳಿಂದ ಘರ್ಷಣೆಯ ಬಳಿಕ ದಿಲ್ಲಿ ಮನಪಾ ಸ್ಥಾಯಿ ಸಮಿತಿಗಳ ಚುನಾವಣೆಯು ನ್ಯಾಯಯುತವಾಗಿ ಶಾಂತಿಯಿಂದ ನಡೆಯುವ ಯಾವ ಲಕ್ಷಣವೂ ಇಲ್ಲ.


ಬುಧವಾರ ದಿಲ್ಲಿಯ ಮೇಯರ್ ಆಗಿ ಶೆಲ್ಲಿ ಒಬೇರಾಯ್ ಆಯ್ಕೆಯಾದ ಮೇಲೆ ಸಂಜೆ ಸ್ಥಾಯಿ ಸಮಿತಿಗಳ ಚುನಾವಣೆಗೆ ಸಿದ್ಧತೆ ನಡೆದಿತ್ತು. ಆದರೆ ಬಿಜೆಪಿ ಮತ್ತು ಎಎಪಿ ಕೌನ್ಸಿಲರ್ ಗಳು ಗುದ್ದಾಡಿಕೊಂಡರು ಹಾಗೂ ನೀರಿನ ಬಾಟಲಿ, ಬ್ಯಾಲೆಟ್ ಬಾಕ್ಸ್ ಗಳನ್ನು ಪರಸ್ಪರ ಎಸೆದುಕೊಂಡುದರಿಂದ ಗಲಾಟೆಯ ಹೊರತು ಅಲ್ಲಿ ಬೇರಾವುದಕ್ಕೂ ಅವಕಾಶವಾಗಲಿಲ್ಲ. ಹಾಗಾಗಿ ಹತ್ತಾರು ಬಾರಿ ಚುನಾವಣೆ ಮುಂದೂಡಲಾಯಿತು.
ಗುರುವಾರ ಬೆಳಿಗ್ಗೆಯಂತೂ ಗಲಾಟೆ ಅತಿಯಾದುದರಿಂದ ಸ್ಥಾಯಿ ಸಮಿತಿಗಳ ಚುನಾವಣೆಯನ್ನು ಒಂದು ದಿನ ಮುಂದೂಡಲಾಯಿತು.


ಬುಧವಾರದಂತೆಯೇ ಯಾವುದೇ ನಿಯಮಾವಳಿಗಳನ್ನು ಅನುಸರಿಸದೆ ಬಿಜೆಪಿ ಮತ್ತು ಎಎಪಿ ಕೌನ್ಸಿಲರ್ ಗಳು ಗಲಾಟೆಯ ಗುದ್ದು ಪ್ರದರ್ಶನ ನೀಡಿದರು. ಮೇಯರ್ ಮತ್ತು ಉಪ ಮೇಯರ್ ಚುನಾವಣೆ ವೇಳೆ ಮೊಬೈಲ್ ಫೋನು ಮತ್ತು ಪೆನ್ನು ಒಳಗೆ ಒಯ್ಯದಂತೆ ತಡೆಯಲಾಗಿತ್ತು. ಆದರೆ ಸ್ಥಾಯಿ ಸಮಿತಿ ಚುನಾವಣೆ ವೇಳೆ ಬಿಜೆಪಿ ಕೌನ್ಸಿಲರ್ ಗಳು ಫೋನು ಮತ್ತು ಪೆನ್ನು ಒಯ್ಯುವುದು ನಮ್ಮ ಹಕ್ಕು ಎಂದು ಕೂಗಾಡಿದರು.
ಮೇಯರ್ ಶೆಲ್ಲಿಯವರು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದರು. ಕೌನ್ಸಿಲರ್ ಗಳು ಗೌರವಯುತವಾಗಿ ನಿಮ್ಮ ಮೊಬೈಲ್ ಇಡುವಲ್ಲಿ ಇಟ್ಟುಕೊಳ್ಳಿ ಎಂದರು. ಒಂದು ಹಂತದಲ್ಲಿ ಬಿಜೆಪಿಯವರು ಹೊಸದಾಗಿ ಮೇಯರ್ ಆಯ್ಕೆ ನಡೆಯಬೇಕು ಎಂದುದೂ, ಎಎಪಿಯವರು ಅದಕ್ಕೆ ನಿರಾಕರಿಸಿದ್ದೂ ನಡೆಯಿತು.

Join Whatsapp
Exit mobile version