Home ಕರಾವಳಿ ಸಂಘಪರಿವಾರದಿಂದ ಅನೈತಿಕ ಪೊಲೀಸ್’ಗಿರಿ: ಎಎಪಿ ಖಂಡನೆ

ಸಂಘಪರಿವಾರದಿಂದ ಅನೈತಿಕ ಪೊಲೀಸ್’ಗಿರಿ: ಎಎಪಿ ಖಂಡನೆ

ಮಂಗಳೂರು: ಹಿಂದುತ್ವ ಸಂಘಟನೆಗಳಿಂದ ನಡೆದಿರುವ ಅನೈತಿಕ ಪೊಲೀಸ್’ಗಿರಿ ಗೂಂಡಾವರ್ತನೆ ಖಂಡನೀಯವಾಗಿದ್ದು, ಕಾನೂನು ಕೈಗೆತ್ತಿಗೊಳ್ಳಲು ಪೊಲೀಸರು ಅವಕಾಶ ನೀಡಬಾರದು ಎಂದು ಆಮ್ ಆದ್ಮಿ ಹೇಳಿದೆ.

ಚುನಾವಣೆ ಹತ್ತಿರ ಆಗುತ್ತಿರುವಂತೆ ಕರಾವಳಿಯಲ್ಲಿ ಅನೈತಿಕ ಗೂಂಡಾಗಿರಿ, ಕೋಮು ವೈಷಮ್ಯದ ಘಟನೆಗಳು ನಡೆಯುತ್ತಿವೆ. ಕೋಮು ದ್ವೇಷವನ್ನು ಹರಡುವ ಮೂಲಕ ಮತಗಳಿಸುವ ಕೆಟ್ಟ ರಾಜಕೀಯ ನಡೆಯುತ್ತಿರುವುದು ಶೋಚನೀಯವಾಗಿದೆ. ರಾಜಕೀಯ ಲಾಭಕ್ಕೋಸ್ಕರ ಧರ್ಮವನ್ನು ಬಳಕೆ ಮಾಡುವುದಲ್ಲದೆ, ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡುತ್ತಿರುವುದು ಖಂಡನೀಯ ಎಂದು ಆಮ್ ಆದ್ಮಿ ಹೇಳಿದೆ.

 ಮೂಲ್ಕಿಯಲ್ಲಿ ಯುವಕನಿಗೆ ಮಾರಣಾಂತಿಕ ಗುಂಪು ಹಲ್ಲೆ ನಡೆಸಿರುವುದು ಅಮಾನುಷ ಕೃತ್ಯವಾಗಿದ್ದು, ಪೊಲೀಸರು ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಮ್ ಆದ್ಮಿ ಜಿಲ್ಲಾ ಅಧ್ಯಕ್ಷ ಸಂತೋಷ್ ಕಾಮತ್ ಒತ್ತಾಯಿಸಿದ್ದಾರೆ.

ಸಮಾಜದಲ್ಲಿ ಯಾರೇ ಆದರು ಕಾನೂನನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡಬಾರದು. ಈ ನಿಟ್ಟಿನಲ್ಲಿ ಪೊಲೀಸರು ಯಾವುದೇ ರಾಜಕೀಯ ಹಸ್ತಕ್ಷೇಪ ಇಲ್ಲದೆ ಕೆಲಸ ಮಾಡುವಂತಾಗಬೇಕು ಎಂದು ಸಂತೋಷ್ ಕಾಮತ್ ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ.

ಪೊಲೀಸರು ಆಡಳಿತ ಪಕ್ಷದ ಒತ್ತಡಕ್ಕೆ ಮಣಿದು ನಿಷ್ಕ್ರಿಯರಾಗಬಾರದು. ಚುನಾವಣೆ ಹತ್ತಿರ ಆಗುತ್ತಿದ್ದಂತೆ ಇಂತಹ ಘಟನೆಗಳು ಹೆಚ್ಚಳ ಆಗುವುದನ್ನು ನಿಯಂತ್ರಿಸಲು ಪೊಲೀಸರು ಹೆಚ್ಚಿನ ನಿಗಾ ವಹಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

Join Whatsapp
Exit mobile version