Home ಟಾಪ್ ಸುದ್ದಿಗಳು ಖಾಸಗಿ ಟ್ರಸ್ಟ್ ಗೆ ಕೆಎಸ್‌ಆರ್‌ಟಿಸಿ ಆಸ್ಪತ್ರೆ: ತೇಜಸ್ವಿ ಸೂರ್ಯ ವಿರುದ್ಧ ಆಮ್‌ ಆದ್ಮಿ ಪಾರ್ಟಿ ಕಿಡಿ

ಖಾಸಗಿ ಟ್ರಸ್ಟ್ ಗೆ ಕೆಎಸ್‌ಆರ್‌ಟಿಸಿ ಆಸ್ಪತ್ರೆ: ತೇಜಸ್ವಿ ಸೂರ್ಯ ವಿರುದ್ಧ ಆಮ್‌ ಆದ್ಮಿ ಪಾರ್ಟಿ ಕಿಡಿ

ಬೆಂಗಳೂರು: ಜಯನಗರದಲ್ಲಿರುವ ಕೆಎಸ್‌ಆರ್‌ಟಿಸಿ ಆಸ್ಪತ್ರೆಯನ್ನು ಖಾಸಗಿ  ಟ್ರಸ್ಟ್ ಗೆ ನೀಡುವ ಸಂಸದ ತೇಜಸ್ವಿ ಸೂರ್ಯ ನಿರ್ಧಾರಕ್ಕೆ ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್‌ ದಾಸರಿ ತೀವ್ರ ವಿರೋಧ ವ್ಯಕ್ತಪಡಿಸಿದರು.

ಮಾಧ್ಯಮಗಳಿಗೆ ಹೇಳಿಕೆ ನೀಡಿದ ಮೋಹನ್‌ ದಾಸರಿ, “ಕೆಎಸ್‌ಆರ್‌ಟಿಸಿ ಕೇಂದ್ರ ವಿಭಾಗದ ಮುಖ್ಯ ಟ್ರಾಫಿಕ್‌ ಮ್ಯಾನೇಜರ್‌ರವರು ಆಸ್ಪತ್ರೆಯನ್ನು ಖಾಸಗಿಯವರಿಗೆ ನೀಡಲು 25.07.2022ರಂದು ಟೆಂಡರ್‌ಗೆ ಆಹ್ವಾನ ಪ್ರಕಟಿಸಿದ್ದಾರೆ. ಆದರೆ ಆಹ್ವಾನದ ಜಾಹೀರಾತಿನಲ್ಲಿರುವ ಹಲವು ಅಂಶಗಳು ಅನುಮಾನಾಸ್ಪದವಾಗಿವೆ. ಚಾರಿಟಿ ಚಟುವಟಿಕೆಗಳಲ್ಲಿ ಕನಿಷ್ಠ 25 ವರ್ಷಗಳ ಅನುಭವ ಇರುವವರು ಹಾಗೂ ಚಾರಿಟಿ ಆಸ್ಪತ್ರೆಯನ್ನು ನಿಭಾಯಿಸಿದವರು ಮಾತ್ರ ಟೆಂಡರ್‌ನಲ್ಲಿ ಭಾಗವಹಿಸಲು ಯೋಗ್ಯರು ಎಂದು ಹೇಳಲಾಗಿದೆ. ಇವುಗಳನ್ನು ಗಮನಿಸಿದರೆ, ಒಂದು ನಿರ್ದಿಷ್ಟ ಟ್ರಸ್ಟ್ ಗೆ ಟೆಂಡರ್‌ ನೀಡಲೆಂದೇ ನಾಟಕೀಯವಾಗಿ ನಿಯಮಗಳನ್ನು ರೂಪಿಸಿರುವುದು ಸ್ಪಷ್ಟವಾಗುತ್ತದೆ” ಎಂದು ಹೇಳಿದರು.

“ಸಂಸದರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಆಸ್ಪತ್ರೆಗೆ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತದೆ ಎಂದು ಟೆಂಡರ್‌ ಆಹ್ವಾನದಲ್ಲಿ ಹೇಳಲಾಗಿದೆ. ಆಸ್ಪತ್ರೆಯ ವಿಚಾರದಲ್ಲಿ ಸಂಸದ ತೇಜಸ್ವಿ ಸೂರ್ಯಗೆ ಮೂಗು ತೂರಿಸಲು ಅವಕಾಶ ನೀಡಿ, ಅವರ ಆಪ್ತರಿಗೆ ಟೆಂಡರ್‌ ನೀಡಲೆಂದೇ ಎಂಪಿಎಲ್‌ಎಡಿ ನಿಧಿಯನ್ನು ಬಳಸಿಕೊಳ್ಳಲಾಗುತ್ತಿದೆ. 1951ರಲ್ಲಿ ಆರಂಭವಾದ ಶ್ರೀ ವಾಸವಿ ಟ್ರಸ್ಟ್‌ ಎಂಬ ಖಾಸಗಿ ಕುಟುಂಬ ಟ್ರಸ್ಟ್ ಗೆ ಆಸ್ಪತ್ರೆಯ ಟೆಂಡರ್‌ ನೀಡಲು ತೇಜಸ್ವಿ ಸೂರ್ಯ ಉತ್ಸುಕರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆಗ, ಸರ್ಕಾರಿ ಆಸ್ಪತ್ರೆಯನ್ನು ಟ್ರಸ್ಟ್ ಗೆ ನೀಡುವುದಕ್ಕೆ ಅಲ್ಲಿನ ಸಿಬ್ಬಂದಿ ವಿರೋಧ ವ್ಯಕ್ತಪಡಿಸಿದರೂ ತೇಜಸ್ವಿ ಸೂರ್ಯ ಮಾತ್ರ ಇದರಿಂದ ಹಿಂದೆ ಸರಿದಿಲ್ಲ” ಎಂದು ಮೋಹನ್‌ ದಾಸರಿ ಹೇಳಿದರು. 

“ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹಾಗೂ ನೌಕರರ ಒಕ್ಕೂಟವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಸೆಪ್ಟೆಂಬರ್‌ 16ರಂದು ಪತ್ರ ಬರೆದಿದ್ದು, ಈ ಕುರಿತು ಮಧ್ಯ ಪ್ರವೇಶಿಸಿ ಆಸ್ಪತ್ರೆಯು ಖಾಸಗಿಯವರ ಪಾಲಾಗುವುದನ್ನು ತಡೆಯಬೇಕೆಂದು ಮನವಿ ಮಾಡಿದ್ದಾರೆ. ಸಿಎಂ ಬೊಮ್ಮಾಯಿಯವರು ಇದನ್ನು ಗಂಭೀರವಾಗಿ ಪರಿಗಣಿಸಿ, ಆಸ್ಪತ್ರೆಯು ಖಾಸಗಿಯವರ ಪಾಲಾಗುವುದನ್ನು ತಪ್ಪಿಸಬೇಕು. ಆಸ್ಪತ್ರೆಯ ಸಿಬ್ಬಂದಿ ಹಾಗೂ ಕೆಎಸ್‌ಆರ್‌ಟಿಸಿ ನೌಕರರ ಜೊತೆ ಮಾತುಕತೆ ನಡೆಸಿ ಆಸ್ಪತ್ರೆಯನ್ನು ಆಧುನೀಕರಣಗೊಳಿಸಲು ಕ್ರಮ ಕೈಗೊಳ್ಳಬೇಕು” ಎಂದು ಮೋಹನ್‌ ದಾಸರಿ ತಮ್ಮ ಟ್ವೀಟ್ ನಲ್ಲಿ ಆಗ್ರಹಿಸಿದ್ದಾರೆ.

Join Whatsapp
Exit mobile version