Home ರಾಜ್ಯ ಪಠ್ಯ ಪರಿಷ್ಕರಣೆ ವಿರೋಧಿ ಪ್ರತಿಭಟನೆಗೆ ಆಮ್‌ ಆದ್ಮಿ ಪಾರ್ಟಿ ಬೆಂಬಲ

ಪಠ್ಯ ಪರಿಷ್ಕರಣೆ ವಿರೋಧಿ ಪ್ರತಿಭಟನೆಗೆ ಆಮ್‌ ಆದ್ಮಿ ಪಾರ್ಟಿ ಬೆಂಬಲ

ಬೆಂಗಳೂರು: ಪಠ್ಯಪುಸ್ತಕ ಪುನರ್ ಪರಿಷ್ಕರಣೆಯಲ್ಲಿ ನಾಡಿನ ಅನೇಕ ಗಣ್ಯರಿಗೆ ಅಪಮಾನ ಮಾಡಿರುವುದನ್ನು ಖಂಡಿಸಿ ಕುವೆಂಪು ಹೋರಾಟ ಸಮಿತಿ ಹಮ್ಮಿಕೊಂಡಿರುವ ಬೃಹತ್‌ ಪ್ರತಿಭಟನೆಗೆ ಆಮ್‌ ಆದ್ಮಿ ಪಾರ್ಟಿ ಸಂಪೂರ್ಣ ಬೆಂಬಲ ಘೋಷಿಸಿದೆ.

ಮಾಧ್ಯಮಗಳ ಜೊತೆ ಮಾತನಾಡಿದ ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ ಸದಂ, “ಜೂನ್‌ 18ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಬೃಹತ್‌ ಪ್ರತಿಭಟನೆಗೆ ಆಮ್‌ ಆದ್ಮಿ ಪಾರ್ಟಿಯ ಸಂಪೂರ್ಣ ಬೆಂಬಲವಿದೆ. ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಶ್ರೀ ಬಾಲಗಂಗಾಧರ ಸ್ವಾಮೀಜಿ, ಶ್ರೀ ಶಿವಕುಮಾರ ಸ್ವಾಮೀಜಿ, ಬಾಬಾ ಸಾಹೇಬ್‌ ಅಂಬೇಡ್ಕರ್‌, ಬಸವಣ್ಣ, ಕುವೆಂಪು ಮತ್ತಿತರ ಅನೇಕರಿಗಾದ ಅವಮಾನವನ್ನು ಸಹಿಸಿಕೊಂಡು ಸುಮ್ಮನಿರುವ ಪ್ರಶ್ನೆಯೇ ಇಲ್ಲ” ಎಂದು ಹೇಳಿದರು.

“ಪಠ್ಯಪುಸ್ತಕಗಳ ಪುನರ್‌ ಪರಿಷ್ಕರಣೆಯನ್ನು ಸಮರ್ಥಿಸಿಕೊಳ್ಳಲು ಶಿಕ್ಷಣ ಸಚಿವ ನಾಗೇಶ್‌ ಅತ್ಯಂತ ಕೀಳುಮಟ್ಟಕ್ಕೆ ಇಳಿದಿದ್ದಾರೆ. ಸಾಹಿತಿ ಬರಗೂರುರವರ ಪರಿಷ್ಕರಣೆಯಲ್ಲಿದ್ದ ಅನೇಕ ಮಹತ್ವದ ಸಾಲುಗಳು ಈಗ ಕೈಬಿಟ್ಟಿರುವುದು ಕಣ್ಣಿಗೆ ಕಾಣುತ್ತಿದ್ದರೂ, ಯಾವುದೇ ಬದಲಾವಣೆ ಮಾಡಿಲ್ಲವೆಂದು ಸುಳ್ಳು ಹೇಳುತ್ತಿದ್ದಾರೆ. ಸುಳ್ಳು ಹೇಳುವ ಮೂಲಕ ನಾಡಿನ ಜನತೆಯನ್ನು ವಂಚಿಸುತ್ತಿರುವವರು ಶಿಕ್ಷಣ ಸಚಿವ ಸ್ಥಾನದಲ್ಲಿರುವುದು ನಾಡಿನ ದುರದೃಷ್ಟ” ಎಂದು ಜಗದೀಶ್‌ ವಿ ಸದಂ ಹೇಳಿದರು.

“ತನ್ನ ಸಿದ್ಧಾಂತಗಳನ್ನು ಪಠ್ಯಪುಸ್ತಕದಲ್ಲಿ ತುರುಕಲೆಂದೇ ಶಿಕ್ಷಣ ಸಚಿವರು ಪರಿಷ್ಕರಣೆಯ ಜವಾಬ್ದಾರಿಯನ್ನು ನಾಡು, ನುಡಿ ಹಾಗೂ ಗಣ್ಯರ ಬಗ್ಗೆ ಗೌರವವಿಲ್ಲದ ರೋಹಿತ್‌ ಚಕ್ರತೀರ್ಥನಿಗೆ ನೀಡಿದ್ದಾರೆ. ಸಿಎಂ ಬಸವರಾಜ್‌ ಬೊಮ್ಮಾಯಿಯವರಿಗೆ ಬಸವಣ್ಣ, ಕುವೆಂಪು ಮುಂತಾದವರ ಬಗ್ಗೆ ಸ್ವಲ್ಪವಾದರೂ ಗೌರವವಿದ್ದರೆ ಸಚಿವ ನಾಗೇಶ್‌ ಹಾಗೂ ರೋಹಿತ್‌ ಚಕ್ರತೀರ್ಥ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ” ಎಂದು ಜಗದೀಶ್‌ ವಿ ಸದಂ ಆಗ್ರಹಿಸಿದರು.

“ರಾಜ್ಯ ಬಿಜೆಪಿ ಸರ್ಕಾರಕ್ಕೆ ಸರ್ಕಾರಿ ಶಾಲೆಗಳ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವ ಮನಸ್ಸಿಲ್ಲ. ಶಿಕ್ಷಕರ ನೇಮಕಾತಿಗೂ ಸರ್ಕಾರ ನಿರುತ್ಸಾಹ ತೋರುತ್ತಿದೆ. ತರಗತಿಗಳು ಆರಂಭವಾಗಿದ್ದರೂ ಸದ್ಯಕ್ಕೆ ಸಮವಸ್ತ್ರ ವಿತರಿಸುವ ಲಕ್ಷಣಗಳು ಕಾಣುತ್ತಿಲ್ಲ. ಈ ಹಿಂದೆ ನೀಡಲಾಗುತ್ತಿದ್ದ ಸೈಕಲ್‌, ಶೂ, ಸಾಕ್ಸ್‌ ಮುಂತಾದವುಗಳನ್ನು ಸರ್ಕಾರ ಸದ್ದಿಲ್ಲದೇ ಸ್ಥಗಿತಗೊಳಿಸಿದೆ. ಹಿಜಾಬ್‌, ಪಠ್ಯಪುಸ್ತಕ ಪರಿಷ್ಕರಣೆ ವಿವಾದಗಳ ಮೂಲಕ ಅನೇಕ ಹುಳುಕುಗಳನ್ನು ಮುಚ್ಚಿ ಹಾಕಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ” ಎಂದು ಜಗದೀಶ್‌ ವಿ ಸದಂ ಆರೋಪಿಸಿದರು.

Join Whatsapp
Exit mobile version