ಬೆಂಗಳೂರು: ವೋಟರ್ ಐಡಿ ಜೊತೆ ಆಧಾರ್ ಜೋಡಣೆ ಕಡ್ಡಾಯವಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದ್ದು, ವೋಟರ್ ಐಡಿ ಜೊತೆ ಆಧಾರ್ ಜೋಡಣೆಯಾಗದಿದ್ದಲ್ಲಿ ಮತದಾರರ ಗುರುತಿನ ಚೀಟಿ ರದ್ದಾಗುವ ಸಾಧ್ಯತೆ ಎಂಬ ಮಾಧ್ಯಮಗಳ ವರದಿಯನ್ನು ಅದು ನಿರಾಕರಿಸಿದೆ.
ಕೆಲವು ಪತ್ರಿಕೆ, ದೃಶ್ಯ ಮಾಧ್ಯಮಗಳು ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ, ಮತದಾರರ ಪಟ್ಟಿಯ ದತ್ತಾಂಶದೊಂದಿಗೆ ಆಧಾರ್ ಸಂಖ್ಯೆಯನ್ನು ಗುರುತಿಸಿ, ದೃಢೀಕರಿಸಿ ಜೋಡಣೆ ಮಾಡುವುದನ್ನು ಕಡ್ಡಾಯಗೊಳಿಸಿರುವುದಾಗಿ ಹಾಗೂ ಆಧಾರ್ ಲಿಂಕ್ ಮಾಡಿಕೊಳ್ಳದಿದ್ದಲ್ಲಿ, ಮತದಾರರ ಗುರುತಿನ ಚೀಟಿ ರದ್ದಾಗುವ ಸಾಧ್ಯತೆಗಳಿರುತ್ತದೆಂದು ವರದಿಯಾಗಿದೆ. ಇದನ್ನು ನಿರಾಕರಿಸಿರುವ ಚುನಾವಣಾ ಆಯೋಗ, ಈ ವರದಿಗಳಲ್ಲಿನ ಅಂಶಗಳು ಭಾರತ ಚುನಾವಣಾ ಆಯೋಗದ ನಿರ್ದೇಶನಕ್ಕೆ ವ್ಯತಿರಿಕ್ತವಾಗಿದೆ ಎಂದು ತಿಳಿಸಿದೆ.
ಇದೊಂದು ಸ್ವಯಂ ಪ್ರೇರಿತ ಪ್ರಕ್ರಿಯೆಯಾಗಿದ್ದು, ಮತದಾರರ ಪಟ್ಟಿಯ ದತ್ತಾಂಶದೊಂದಿಗೆ ಆಧಾರ್ ಸಂಖ್ಯೆಯನ್ನು ಬಳಸಿ ಅಥವಾ ಇತರೆ ನಿಗಧಿತ ದಾಖಲೆಗಳ ಮೂಲಕವೂ ಸಹ ಗುರುತಿಸಿ, ದೃಢೀಕರಿಸಿ ಜೋಡಣೆ ಮಾಡಬಹುದಾಗಿರುತ್ತದೆಂದು ವಿಶೇಷ ಆಯುಕ್ತರು(ಆಡಳಿತ) ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿ ರಂಗಪ್ಪ ಸ್ಪಷ್ಟಪಡಿಸಿದ್ದಾರೆ.