Home ಟಾಪ್ ಸುದ್ದಿಗಳು ಪ್ರೇಯಸಿಗಾಗಿ ಹೆತ್ತವರನ್ನು ತೊರೆದ ಭಗ್ನ ಪ್ರೇಮಿ; ವಿಷ ಸೇವಿಸಿ ಆತ್ಮಹತ್ಯೆ

ಪ್ರೇಯಸಿಗಾಗಿ ಹೆತ್ತವರನ್ನು ತೊರೆದ ಭಗ್ನ ಪ್ರೇಮಿ; ವಿಷ ಸೇವಿಸಿ ಆತ್ಮಹತ್ಯೆ

ಶಿವಮೊಗ್ಗ : ಪ್ರೇಯಸಿಗಾಗಿ ಹೆತ್ತವರ ಸಂಬಂಧವನ್ನೇ ಕಳೆದುಕೊಂಡ ಯುವಕ ಕೊನೆಗೆ ಆಕೆಯೂ ಸಿಗದ ಕಾರಣ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಸೊರಬ ತಾಲೂಕಿನ ಬೆಟ್ಟದಕೂರ್ಲಿ ಯಲ್ಲಿ ನಡೆದಿದೆ.

ಮೃತ ಯುವಕನನ್ನುಮೂಲತಃ ಹಾಸನ ಜಿಲ್ಲೆ ಅರಸೀಕೆರೆಯ ದಿಲೀಪ್ ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಗಾರ್ಮೆಂಟ್ಸ್ ವೊಂದರಲ್ಲಿ ಅಸಿಸ್ಟೆಂಟ್ ಕ್ವಾಲಿಟಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ.  ಅದೇ ಗಾರ್ಮೆಂಟ್ಸ್ ನಲ್ಲಿ ಸ್ಯಾಂಪಲ್ ಟೈಲರ್ ಆಗಿ ಕೆಲಸ ಮಾಡುತ್ತಿದ್ದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬೆಟ್ಟದ ಕೂರ್ಲಿಯ  ಯುವತಿಯೊಂದಿಗೆ ಪ್ರೀತಿ ಉಂಟಾಗಿದ್ದು ಇಬ್ಬರೂ ಸಹ ಪರಸ್ಪರ ಪ್ರೀತಿಸುತ್ತಿದ್ದರು. ವಿಷಯ ತಿಳಿದಿದ್ದ ದಿಲೀಪ್ ನ ಮನೆಯವರು, ಈ ಸಂಬಂಧವನ್ನು ಒಪ್ಪದ ಕಾರಣ ಹೆತ್ತವರನ್ನು ನಿರಾಕರಿಸಿ ಮನೆಯಿಂದ ಹೊರಬಂದಿದ್ದ.

ತನ್ನ ಹಾಗೂ ಪ್ರೇಯಸಿಯ ಮುಂದಿನ ಜೀವನಕ್ಕಾಗಿ ಯುವಕ ಹಗಲು ರಾತ್ರಿಎನ್ನದೇ ಕಷ್ಟಪಟ್ಟು ದುಡಿಯುತ್ತಿದ್ದ. ಇದ್ದಕ್ಕಿದ್ದಂತೆ ತಾಯಿಯ ಅನಾರೋಗ್ಯದ ನೆಪ ಹೇಳಿ ಊರಿಗೆ ಬಂದಿದ್ದ ಯುವತಿ, ಪ್ರಿಯಕರನಿಂದ ಅಂತರ ಕಾಯ್ದುಕೊಳ್ಳಲಾರಂಭಿಸಿದ್ದು, ಊರಿಗೆ ಬಂದ ಬಳಿಕ  ಅದೇ ಊರಿನ ಬೇರೊಬ್ಬನೊಂದಿಗೆ ಮೇ 20ರಂದು ಮದುವೆಯಾಗಿದ್ದಾಳೆ ಎನ್ನಲಾಗಿದೆ. 

ಈ ವಿಷಯ ತಿಳಿದ ದಿಲೀಪ್, ಇದೇ 24ರಂದು ಆನವಟ್ಟಿಯ ತಲ್ಲೂರು ಗ್ರಾಮಕ್ಕೆ ಬಂದಿದ್ದ. ಅಷ್ಟರೊಳಗೆ ತನ್ನ ಪ್ರಿಯತಮೆಯ ವಿವಾಹವಾಗಿರುವುದು ಅವನಿಗೆ ತಿಳಿದಿದೆ. ಇದರಿಂದ ಮನನೊಂದ ದಿಲೀಪ್, ಯುವತಿ ವಾಸವಿರುವ ಸೊರಬ ತಾಲೂಕಿನ ಬೆಟ್ಟದಕೂರ್ಲಿ ಗ್ರಾಮಕ್ಕೆ ತೆರಳಿ, ಅಲ್ಲಿನ ಕೆರೆ ಏರಿ ಮೇಲೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿಷದ ಬಾಟಲಿಯ ಪಕ್ಕದಲ್ಲೇ ಬಿದ್ದಿದ್ದ ಯುವಕನನ್ನು ಗಮನಿಸಿದ ಸ್ಥಳೀಯ ದಾರಿಹೋಕರು ತಕ್ಷಣವೇ ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿಯಲಿಲ್ಲ. ಈ ಬಗ್ಗೆ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ತಮ್ಮ ಮಗನನ್ನು ಕಳೆದುಕೊಂಡ ಹೆತ್ತವರ  ಆಕ್ರಂದನ ಮುಗಿಲು ಮುಟ್ಟಿದೆ.

Join Whatsapp
Exit mobile version