ತುಮಕೂರು: ತೆಲುಗು ಸಿನಿಮಾ ಒಂದರಿಂದ ಪ್ರಭಾವಿತನಾದ ದ್ವಿತೀಯ ಪಿಯುಸಿಯ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತುಮಕೂರು ಮಧುಗಿರಿ ತಾಲೂಕು ಗಿಡ್ಡಯ್ಯನಪಾಳ್ಯದಲ್ಲಿ ನಡೆದಿದೆ.
22 ವರ್ಷದ ರೇಣುಕ ಎಂಬಾತ ತೆಲುಗು ಭಾಷೆಯ ಅರುಂಧತಿ ಸಿನಿಮಾ ನೋಡಿದ್ದು, ಅದರಿಂದ ಭಾರಿ ಪ್ರಭಾವಿತನಾಗಿದ್ದನು. ತನಗೂ ದಿವ್ಯಶಕ್ತಿ ಬರಬೇಕು ಎಂದು ತನ್ನ ಮೈಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಈ ಚಿತ್ರದಲ್ಲಿ ನಾಯಕಿ ಮುಕ್ತಿ ಪಡೆಯಲು ತನ್ನನ್ನು ಸಾಯಿಸಿಕೊಂಡು, ನಂತರ ಪಿಶಾಚಿಯಾಗಿ ಬಂದ ಖಳನಾಯಕನನ್ನು ಕೊಲ್ಲುತ್ತಾಳೆ. ನಾಯಕಿಗೆ ಸೂಪರ್ ನ್ಯಾಚುರಲ್ ಪವರ್ ಬರುವ ಅಂಶವೇ ರೇಣುಕನನ್ನು ಪ್ರಭಾವಿಸಿದೆ ಎನ್ನಲಾಗಿದೆ.
ತನಗೂ ಮುಕ್ತಿ ಬೇಕು, ತನಗೂ ಸೂಪರ್ ನ್ಯಾಚುರಲ್ ಪವರ್ ಬೇಕು ಎಂದು ಹೇಳಿಕೊಂಡು ಪೆಟ್ರೋಲ್ ಸುರಿದುಕೊಂಡು ಪಿಯುಸಿ ವಿದ್ಯಾರ್ಥಿ ರೇಣುಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬೆಂಕಿ ಹಚ್ಚಿಕೊಂಡಿದ್ದನ್ನು ಪಾಲಕರು ನೋಡಿ, ಬೆಂಕಿ ನಂದಿಸಿ ಪ್ರಾಣ ರಕ್ಷಿಸಿದ್ದಾರೆ. ಬೆಂಕಿ ಹಚ್ಚಿಕೊಂಡಾಗ “ನನಗೆ ಮುಕ್ತಿ ಬೇಕು, ಮುಕ್ತಿ ಬೇಕು” ಎಂದು ಈತ ನರಳಾಡುತ್ತಿದ್ದನು. ಮಧುಗಿರಿ ಹಾಗೂ ತುಮಕೂರಿನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.