Home ಟಾಪ್ ಸುದ್ದಿಗಳು ಉಡುಪಿ: ಟ್ರಕ್‌ ಢಿಕ್ಕಿ ಹೊಡೆದು ಯುವಕ ಮೃತ್ಯು; ಅಂಗಾಂಗ ದಾನ

ಉಡುಪಿ: ಟ್ರಕ್‌ ಢಿಕ್ಕಿ ಹೊಡೆದು ಯುವಕ ಮೃತ್ಯು; ಅಂಗಾಂಗ ದಾನ

ಕಾಪು: ಟ್ರಕ್‌ ಢಿಕ್ಕಿ ಹೊಡೆದು ಮಿದುಳು ನಿಷ್ಕ್ರಿಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಉದ್ಯಾವರ ಬೋಳಾರ ಗುಡ್ಡೆ ಅಂಕುದ್ರು ನಿವಾಸಿ ಪ್ರಶಾಂತ್‌ (37) ಅವರ ಅಂಗಾಂಗಳನ್ನು ದಾನ ಮಾಡುವ ಮೂಲಕ ಅವರ ಮನೆಯವರು ಮಾನವೀಯತೆ ಮೆರೆದಿದ್ದಾರೆ.

ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಕನ್ನಿ ಪಾರ್ಟಿ ಕೆಲಸ ನಿರ್ವಹಿಸುತ್ತಿದ್ದ ಪ್ರಶಾಂತ್‌ ಬುಧವಾರ ಮಧ್ಯಾಹ್ನ ಕೆಲಸ ಮುಗಿಸಿ ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಹಲೀಮಾ ಸಾಬು ಸಭಾಭವನದ ಬಳಿ ರಸ್ತೆ ದಾಟುತ್ತಿದ್ದ ವೇಳೆ ಟ್ರಕ್‌ ಢಿಕ್ಕಿ ಹೊಡೆದು ರಸ್ತೆ ಬದಿ ಬಿದ್ದಿದ್ದರು.

ತಲೆಗೆ ತೀವ್ರ ಗಾಯಗೊಂಡಿದ್ದ ಅವರನ್ನು ಮಿತ್ರರಾದ ಪ್ರವೀಣ್‌ ಮತ್ತು ಅಭಿಷೇಕ್‌ ಅವರು ಸ್ಥಳೀಯರ ಸಹಾಯದಿಂದ ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರ ಸೂಚನೆಯಂತೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿದ್ದರು. ತಲೆಗೆ ತೀವ್ರ ಪೆಟ್ಟಾಗಿದ್ದ ಅವರ ಮೆದುಳು ನಿಷ್ಟ್ರಿಯಗೊಂಡಿದ್ದು, ಅವರು ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟರು.

ವೈದ್ಯರಿಂದ ಮಾಹಿತಿ

ಆಸ್ಪತ್ರೆಯ ವೈದ್ಯರು ಮೃತರ ಸಂಬಂಧಿಕರಿಗೆ ಅಂಗಾಂಗ ದಾನದ ಬಗ್ಗೆ ಮಾಹಿತಿ ನೀಡಿದ್ದರು. ಮೃತರ ಸಹೋದರಿ ಪ್ರಮೀಳಾ ಅವರು ಸಹೋದರನ ಅಂಗಾಂಗ ದಾನ ಮಾಡಲು ಒಪ್ಪಿಗೆ ನೀಡುವ ಮೂಲಕ ಇತರ ರೋಗಿಗಳ ಜೀವ ಉಳಿಸುವ ವೈದ್ಯರ ಸಲಹೆಗೆ ಪೂರಕವಾಗಿ ಸ್ಪಂದಿಸಿದ್ದಾರೆ.

ಅವಿವಾಹಿತರಾಗಿದ್ದ ಪ್ರಶಾಂತ್‌ ಅವರು ತಾಯಿ ಮತ್ತು ಸಹೋದರಿ ಯನ್ನು ಅಗಲಿದ್ದಾರೆ. ಅಂಕುದ್ರುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಅವರ ಕುಟುಂಬಕ್ಕೆ ಪ್ರಶಾಂತ್‌ ಅವರ ಸಂಪಾದನೆಯೇ ಆದಾಯದ ಮೂಲವಾಗಿತ್ತು. ಅಪಘಾತಕ್ಕೆ ಕಾರಣನಾದ ಟ್ರಕ್‌ ಚಾಲಕ ಬಿ. ಜಗನ್ನಾಥ ಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಕಾಪು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರಿಸಿದ್ದಾರೆ.

ಮೃತ ಯುವಕನ ಕಿಡ್ನಿ ಮತ್ತು ಲಿವರ್‌ ಅನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯರ ಮೂಲಕ ಸುರಕ್ಷಿತವಾಗಿ ತೆಗೆದು ಮಂಗಳೂರು ಮತ್ತು ಬೆಂಗಳೂರಿಗೆ ಸಾಗಿಸಲಾಗಿದೆ.

Join Whatsapp
Exit mobile version