ಮುಂಬೈ: ಎನ್ ಸಿಪಿ ಶಾಸಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಜಿತೇಂದ್ರ ಅವ್ಹಾದ್ ಸೋಮವಾರ ತನ್ನ ವಿರುದ್ಧ ಪೊಲೀಸರು ದಾಖಲಿಸಿರುವ ಲೈಂಗಿಕ ಕಿರುಕುಳ ಸೇರಿದಂತೆ ನಕಲಿ ಪ್ರಕರಣಗಳಿಗಾಗಿ ವಿಧಾನಸಭೆಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ಹೇಳಿಕೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವ್ಹಾದ್, ಕಳೆದ 72 ಗಂಟೆಗಳಲ್ಲಿ ಪೊಲೀಸರು ನನ್ನ ವಿರುದ್ಧ ಎರಡು ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ನನ್ನ ಮೇಲಿರುವ ಇಂತಹ ಸುಳ್ಳು ಮೊಕದ್ದಮೆಗಳ ವಿರುದ್ಧ ನಾನು ಹೋರಾಡುತ್ತೇನೆ. ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ನಾನು ನನ್ನ ಕಣ್ಣುಗಳಿಂದ ನೋಡಲಾರೆ ಎಂದು ಹೇಳಿದ್ದಾರೆ.
ಭಾನುವಾರ ಮುಂಬ್ರಾದಲ್ಲಿ ಹೊಸ ಸೇತುವೆಯನ್ನು ಮುಖ್ಯಮಂತ್ರಿ ಏಕನಾಥ ಶಿಂಧೆ ಉದ್ಘಾಟಿಸುವ ಸಂದರ್ಭದಲ್ಲಿ ಶಾಸಕ ಅವ್ಹಾದ್ ದುರುದ್ದೇಶದಿಂದ ನನ್ನನ್ನು ಸ್ಪರ್ಶಿಸಿದ್ದಾರೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರಿದಾ ಅಸ್ಗರ್ ರಶೀದ್ ಆರೋಪಿಸಿದ್ದಾರೆ. ಈ ಸಂಬಂಧ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಜಿತೇಂದ್ರ ಅವ್ಹಾದ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು.
ಇದಕ್ಕೂ ಮುನ್ನ ನವೆಂಬರ್ 7ರಂದು ಥಾಣೆಯ ವಿವಿಯಾನಾ ಮಾಲ್ ನಲ್ಲಿ ‘ಹರ್ ಹರ್ ಮಹಾದೇವ್’ ಸಿನಿಮಾ ಪ್ರದರ್ಶನ ತಡೆದು ಪ್ರತಿಭಟನೆ ನಡೆಸಿದ್ದಕ್ಕೆ ಸಂಬಂಧಿಸಿದಂತೆ ಶಾಸಕ ಅವ್ಹಾದ್ ಮತ್ತು ಅವರ ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ದರು. ಇದರಲ್ಲಿ ಅವ್ಹಾದ್ ಜಾಮೀನು ಪಡೆದಿದ್ದಾರೆ.