ಶ್ರೀನಗರ: ಚಾಲಕನಿಲ್ಲದೆ ರೈಲೊಂದು 84 ಕಿ.ಮೀ. ದೂರ ಕ್ರಮಿಸಿರುವ ಭಾರೀ ಅಪಾಯಕಾರಿ ಘಟನೆ ಇಂದು ನಡೆದಿದೆ.
ಜಮ್ಮು ಮತ್ತು ಕಾಶ್ಮೀರದ ಕಥುವಾ ನಿಲ್ದಾಣದಲ್ಲಿ ಸರಕು ಸಾಗಣೆ ರೈಲನ್ನು ಸಿಬ್ಬಂದಿ ಬದಲಾವಣೆಗಾಗಿ ಚಾಲಕ ಮತ್ತು ಸಹ ಚಾಲಕರು ನಿಲ್ಲಿಸಿದ್ದಾರೆ. ಈ ವೇಳೆ ರೈಲಿನ ಇಂಜಿನ್ ಆನ್ ಆಗಿತ್ತು. ಚಾಲಕ ಕೆಳಗಿಳಿಯುವ ಮೊದಲು ಹ್ಯಾಂಡ್ಬ್ರೇಕ್ ನ್ನು ಎಳೆಯಲು ಮರೆತಿದ್ದಾನೆ.
ಆ ಕಾರಣ ಹಾಗೂ ಇಳಿಜಾರಿನ ಮಾರ್ಗವಿದ್ದ ಕಾರಣ ರೈಲು ಮುಂದಕ್ಕೆ ಚಲಿಸಿದೆ.
ಚಾಲಕನಿಲ್ಲದೆ ರೈಲು ಬರೋಬ್ಬರಿ 84 ಕಿ.ಮೀ ದೂರ ಕ್ರಮಿಸಿದೆ. ಹೀಗೆ ಸಾಗಿದ ರೈಲನ್ನು ಪಂಜಾಬ್ನ ಮುಕೇರಿಯನ್ ಜಿಲ್ಲೆಯಲ್ಲಿ ನಿಲ್ಲಿಸಲಾಗಿದೆ.
ರೈಲನ್ನು ನಿಲ್ಲಿಸಲು ಅಧಿಕಾರಿಗಳು ನಡೆಸಿದ ಬಹು ಪ್ರಯತ್ನಗಳು ವಿಫಲವಾಗಿದ್ದವು. ಅಂತಿಮವಾಗಿ ಪ್ರಯಾಣಿಕರ ರೈಲುಗಳ ಚಾಲಕರು ಮತ್ತು ಸಿಬ್ಬಂದಿಗಳ ಸಹಾಯದಿಂದ ದಸುಹಾ ಬಳಿಯ ಉಂಚಿ ಬಸ್ಸಿ ಪ್ರದೇಶದಲ್ಲಿ ನಿಲ್ಲಿಸಲು ಸಾಧ್ಯವಾಯಿತು ಎಂದು ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ.
ಗೂಡ್ಸ್ ರೈಲು ರೈಲ್ವೇ ನಿರ್ಮಾಣಕ್ಕೆ ಸರಕುಗಳನ್ನು ಸಾಗಿಸುತ್ತಿತ್ತು ಎಂದು ರೈಲ್ವೇ ಮೂಲಗಳು ತಿಳಿಸಿವೆ. ಅದೃಷ್ಟವಶಾತ್ ಯಾವುದೇ ಇತರ ರೈಲು ವಿರುದ್ಧ ದಿಕ್ಕಿನಿಂದ ಅದರ ಹಳಿಯಲ್ಲಿ ಇರಲಿಲ್ಲ. ಇದರಿಂದಾಗಿ ಭಾರಿ ಅನಾಹುತ ತಪ್ಪಿದಂತಾಯಿತು.
ಸದ್ಯ ಘಟನೆಯಲ್ಲಿ ಯಾವುದೇ ಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ. ಘಟನೆ ಕುರಿತು ರೈಲ್ವೇ ಇಲಾಖೆ ತನಿಖೆಗೆ ಆದೇಶಿಸಿದೆ.