Home ಟಾಪ್ ಸುದ್ದಿಗಳು ಹಾಸನದ ಲೈಂಗಿಕ ಹಗರಣದ ಸಮಗ್ರ ತನಿಖೆ ನಡೆಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಿ: ವಿಮೆನ್ ಇಂಡಿಯಾ...

ಹಾಸನದ ಲೈಂಗಿಕ ಹಗರಣದ ಸಮಗ್ರ ತನಿಖೆ ನಡೆಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಿ: ವಿಮೆನ್ ಇಂಡಿಯಾ ಮೂವ್ಮೆಂಟ್

ಬೆಂಗಳೂರು: ಹಾಸನದ ಲೈಂಗಿಕ ಹಗರಣದ ಸಮಗ್ರ ತನಿಖೆ ನಡೆಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಆಗ್ರಹ ಮಾಡಿದೆ ‌

ಪತ್ರಿಕಾ ಪ್ರಕಟನೆ ಹೊರಡಿಸಿದ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮ, ದೇಶದಾದ್ಯಂತ ವೈರಲ್ ಆಗುತ್ತಿರುವ ಹಾಸನ ರಾಜಕಾರಣಿಯ ಪೆನ್ ಡ್ರೈವ್ ವೀಡಿಯೋ ಪ್ರಕರಣ ಪೈಶಾಚಿಕ ಕೃತ್ಯವಾಗಿದೆ. ಇದರಿಂದಾಗಿ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ ಎಂದಿದ್ದಾರೆ.

ಬೇಲಿಯೇ ಎದ್ದು ಹೊಲ ಮೇಯ್ದಂತೆ, ಓರ್ವ ಜನಸೇವಕನಾಗಿ ಮಹಿಳಾ ಸುರಕ್ಷತೆಯನ್ನು ಖಾತರಿಪಡಿಸಬೇಕಾದ ರಾಜಕಾರಣಿಗಳ ಸುಪರ್ದಿಯಲ್ಲೂ ಹೆಣ್ಣು ಸುರಕ್ಷಿತಳಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ.
ತಾನೋರ್ವ ಘನತೆವೆತ್ತ ಸ್ಥಾನದಲ್ಲಿರುವ ಜನಪ್ರತಿನಿಧಿ ಎಂಬುದನ್ನು ಮರೆತು, ಆಮಿಷ, ಬೆದರಿಕೆಗಳ ಮೂಲಕ
ಸುಮಾರು ಎರಡು ಸಾವಿರದಷ್ಟು ಮಹಿಳೆಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿದ್ದೇ ಅಲ್ಲದೆ, ಅದನ್ನು ಸ್ವತಃ ವೀಡಿಯೋ ಚಿತ್ರೀಕರಿಸಿ ವಿಕೃತಿ ಮೆರೆದಿರುವ ಈ ರಾಜಕಾರಣಿಯನ್ನು ಬಂಧಿಸಿ ಸಂತ್ರಸ್ತ ಮಹಿಳೆಯರಿಗೆ ನ್ಯಾಯವೊದಗಿಸಬೇಕು. ಹೆಣ್ಣನ್ನು ಕೇವಲ ಭೋಗದ ವಸ್ತುವಾಗಿಸಿ, ಆಕೆಯ ಸ್ವಾಭಿಮಾನ, ಘನತೆ, ಗೌರವಗಳೊಂದಿಗೆ ಚೆಲ್ಲಾಟವಾಡಿರುವ ಈ ಅಪ್ರಬುದ್ಧ ರಾಜಕಾರಣಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ವೀಡಿಯೋವನ್ನು ಪೆನ್ ಡ್ರೈವಿನಿಂದ ಪ್ರಸಾರ ಮಾಡಿದವರನ್ನೂ ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು.ಇದಕ್ಕಾಗಿ ವಿಶೇಷ ಕ್ಷಿಪ್ರ ತನಿಖಾ ತಂಡ ರಚಿಸಿ ಸಂತ್ರಸ್ತರಿಗೆ ಅಗತ್ಯ ಕಾನೂನು ಸಹಕಾರ,ಭದ್ರತೆ ಖಾತ್ರಿಪಡಿಸಬೇಕು. ವೈರಲ್ ಆಗುತ್ತಿರುವ ವೀಡಿಯೋ ಪ್ರಸಾರವನ್ನು ತಕ್ಷಣ ತಡೆಹಿಡಿಯುವ ವ್ಯವಸ್ಥೆಯನ್ನು ಮಾಡಬೇಕೆಂದು ಫಾತಿಮಾ ನಸೀಮ ತಿಳಿಸಿದ್ದಾರೆ.

Join Whatsapp
Exit mobile version