►66ನೇ ಕರ್ನಾಟಕ ರಾಜ್ಯೋತ್ಸವದ ರಾಷ್ಟ್ರಧ್ವಜಾರೋಹಣಗೈದ ಉಸ್ತುವಾರಿ ಸಚಿವ
ಮಂಗಳೂರು; ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಸೋಮವಾರ ಮಂಗಳೂರು ನಗರದ ನೆಹರೂ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಸಂದೇಶ ನೀಡಿದರು.
ಬಳಿಕ ಜಿಲ್ಲೆಯ ಜನತೆಗೆ ಸಂದೇಶ ನೀಡಿದ ಅವರು, 66ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ದೇಶದ ತ್ರಿವರ್ಣ ಧ್ವಜಾರೋಹಣ ಮಾಡುವ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ. ರಾಜ್ಯ ಮತ್ತು ಜಿಲ್ಲೆಯಾದ್ಯಂತ ಸುಖಃ, ಶಾಂತಿ, ನೆಮ್ಮದಿ ಮತ್ತು ಸಾಮರಸ್ಯ ನೆಲೆಸಲಿ ಎಂದು ಹಾರೈಸಿದರು.
ಭಾರತೀಯ ಭಾಷೆ ಸಂಸ್ಕೃತಿಗಳು ಭಾರತೀಯರಷ್ಟೇ ಅಲ್ಲದೇ ಅನೇಕ ಪಾಶ್ಚಿಮಾತ್ಯ ಮಹನಿಯರೂ ಕೊಡುಗೆ ನೀಡಿದ್ದಾರೆ. ಕನ್ನಡದ ಮೊದಲ ದಿನಪತ್ರಿಕೆ ಮಂಗಳೂರು ಸಮಾಚಾರ ಪತ್ರಿಕೆ ರೆವ್. ಹರ್ಮನ್ ಫ್ರೆಡ್ರಿಕ್ ಮೊಗ್ಲಿಂಗ್ ಸಂಪಾದಕತ್ವದಲ್ಲಿ 1842 ರಲ್ಲಿ ಮಂಗಳೂರಿನಿಂದ ಪ್ರಕಟಣೆಯನ್ನು ಪ್ರಾರಂಭಿಸಿರುವುದು ನಮ್ಮ ಹೆಮ್ಮೆ.
ಕೋವಿಡ್-19 ಸೋಂಕಿನ ಎರಡನೇ ಅಲೆ ನಿರ್ವಹಣೆಯಲ್ಲಿ ಜೀವದ ಹಂಗು ತೊರೆದು ತಮ್ಮನ್ನು ತೊಡಗಿಸಿಕೊಂಡಿರುವ ವೈದ್ಯರು, ಶುಶ್ರೂಷಕರು, ಇತರ ವೈದ್ಯಕೇತರ ಸಿಬ್ಬಂದಿ, ಪೊಲೀಸರು, ಜಿಲ್ಲಾ ಆಡಳಿತ, ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯವರನ್ನು ಕೃತಜ್ಞತಾ ಪೂರ್ವಕವಾಗಿ ಈ ಸಂದರ್ಭದಲ್ಲಿ ನೆನೆಯುತ್ತೇನೆ ಎಂದರು.
ಸಂಭಾವ್ಯ ಮೂರನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಲು ಈಗಾಗಲೇ 12 ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳು ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಿವೆ. ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ತಲಾ 5 ಬೆಡ್ಗಳಿಗೆ ಐಸಿಯು ವೆಂಟಿಲೇಟರ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಶೇ.89 ರಷ್ಟು ಮಂದಿಗೆ ಕೋವಿಡ್ ಮೊದಲನೇ ಡೋಸ್ ಹಾಗೂ ಶೇ.53 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ ಎಂದು ಹೇಳಿದರು.
ಎಬಿ-ಎಆರ್ಕೆ ಯೋಜನೆಯಡಿ 5,490 ಕೋವಿಡ್ ಹಾಗೂ 15,840 ಕೋವಿಡ್ಯೇತರ ರೋಗಿಗಳಿಗೆ 61 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು ಚಿಕಿತ್ಸೆಗೆ ಪಾವತಿಸಲಾಗಿದೆ. ಜಿಲ್ಲೆಯ ಆರೋಗ್ಯಾಧಿಕಾರಿಗಳಿಗೆ ಉತ್ತಮ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ಇತ್ತೀಚಿಗೆ ನೂತನ ಸ್ಕಾರ್ಪಿಯೋ ಹಾಗೂ ಬೊಲೇರೋ ವಾಹನಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಲಾಗಿದೆ. ಒಂದು ಸಾವಿರ ಹಾಗೂ 930 ಲೀ. ವೈದ್ಯಕೀಯ ಆಮ್ಲಜನಕವನ್ನು ಉತ್ಪಾದನೆ ಮಾಡುವ ಘಟಕವನ್ನು ಇತ್ತೀಚೆಗಷ್ಟೇ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿ ಲೋಕಾರ್ಪಣೆ ಮಾಡಲಾಯಿತು ಎಂದು ತಿಳಿಸಿದರು,.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಮುಖ್ಯ ರಸ್ತೆಯಾದ ಮಂಗಳೂರು-ಅತ್ರಾಡಿ ರಾಜ್ಯ ಹೆದ್ದಾರಿ ಸಂಖ್ಯೆ 67 ರಲ್ಲಿ 1 ಕೆಳ ಸೇತುವೆ ಹಾಗೂ 1 ಬೃಹತ್ ಸೇತುವೆಯನ್ನೊಳಗೊಂಡಂತೆ 2.27 ಕಿ.ಮೀ ಉದ್ದದ ಚಾಚುವನ್ನು (ವ್ಯಾಪ್ತಿಯ ಪ್ರದೇಶವನ್ನು) ಚತುಷ್ಪಥಗೊಳಿಸಿ ಅಭಿವೃದ್ಧಿಪಡಿಸುವ ಕಾಮಗಾರಿಯನ್ನು 50 ಕೋಟಿ ಅಂದಾಜು ಮೊತ್ತದಲ್ಲಿ ಕೈಗೊಂಡಿದ್ದು, ಹೊಸ ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 2021-22ನೇ ಸಾಲಿಗೆ ಎಸ್.ಎಸ್.ಎಲ್.ಸಿಯಲ್ಲಿ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾದ 378 ವಿದ್ಯಾರ್ಥಿಗಳಿಗೆ 72.30 ಲಕ್ಷ ರೂ.ಗಳು ಹಾಗೂ ಮೆಟ್ರಿಕ್ ನಂತರದ 37 ವಿದ್ಯಾರ್ಥಿಗಳಿಗೆ 10.20 ಲಕ್ಷ ರೂ.ಗಳ ಪ್ರೋತ್ಸಾಹಧನ ನೀಡಲಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಜಿಲ್ಲೆಯ 32 ಗ್ರಾಮಗಳು ಆಯ್ಕೆಯಾಗಿವೆ. ಈ ಗ್ರಾಮಗಳ ವಿವಿಧ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಒಟ್ಟು ರೂ. 32 ಕೋಟಿ ರೂ.ಗಳ ಅನುದಾನ ಹಂಚಿಕೆ ಮಾಡಲಾಗಿದ್ದು, 710 ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ.
ಯೋಜನೆಯಡಿ ಜಿಲ್ಲೆಯಲ್ಲಿ 1,46,723 ಕುಟುಂಬಗಳಿಗೆ ಉದ್ಯೋಗ ಚೀಟಿ ವಿತರಿಸಲಾಗಿದೆ. ಇದೂವರೆಗೆ 9.86 ಲಕ್ಷ ಮಾನವ ದಿನಗಳನ್ನು ಸೃಜಿಸಿ 4870.36 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದರು.
ಅಮೃತ ಗ್ರಾಮೀಣ ವಸತಿ ಯೋಜನೆಗೆ ಆಯ್ಕೆಗೊಂಡಿರುವ 27 ಗ್ರಾಮ ಪಂಚಾಯತ್ಗಳಲ್ಲಿ ಒಟ್ಟು 2,390 ವಸತಿ ರಹಿತರು ಹಾಗೂ 3,170 ನಿವೇಶನ ರಹಿತರಿದ್ದು, ಅವರೆಲ್ಲರಿಗೂ ಸೌಲಭ್ಯ ಕಲ್ಪಿಸುವ ಗುರಿಯನ್ನು ಹೊಂದಲಾಗಿದೆ.
ಬಾಡಿಗೆ ಕಟ್ಟಡದಲ್ಲಿರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಕ್ಕೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಪ್ರಸಕ್ತ ಸಾಲಿನಲ್ಲಿ 2.01 ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದೆ. ಅಲೆಮಾರಿ, ಅರೆ-ಅಲೆಮಾರಿ ಜನಾಂಗದ ನಿವೇಶನ ರಹಿತರಿಗೆ ಪ್ರಸಕ್ತ ಸಾಲಿನಲ್ಲಿ ಒಟ್ಟು 9 ಅರ್ಹ ಫಲಾನುಭವಿಗಳಿಗೆ ನಿವೇಶನ ಮಂಜೂರು ಮಾಡಿ ಹಕ್ಕುಪತ್ರಗಳನ್ನು ವಿತರಿಸಲಾಗಿದೆ ಎಂದು ಅಂಗಾರ ತಿಳಿಸಿದರು.
ಜಿಲ್ಲೆಯಲ್ಲಿ ಒಂದೂವರೆ ವರ್ಷದ ನಂತರ ಪೂರ್ಣ ಪ್ರಮಾಣದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಭೌತಿಕ ತರಗತಿಗಳು ಯಶಸ್ವಿಯಾಗಿ ಪ್ರಾರಂಭಗೊಂಡಿವೆ. 3,20,000 ವಿದ್ಯಾರ್ಥಿಗಳು ಅತ್ಯಂತ ಸಂತಸದಿಂದ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ನಿತ್ಯದ ಹಾಜರಾತಿ ಪ್ರಮಾಣ ಉತ್ತಮವಾಗಿದೆ.
27 ಶಾಲೆಗಳ ಭೌತಿಕ ಸೌಲಭ್ಯಗಳಿಗೆ 2.70 ಕೋಟಿ ರೂ.ಗಳ ಅನುದಾನ ಕಾಯ್ದಿರಿಸಿ, ಕ್ರಿಯಾ ಯೋಜನೆಯ ಅನುಮೋದನೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಬಂಟ್ವಾಳ ತಾಲೂಕಿನ ಮೊಂಟೆಪದವು, ಪುತ್ತೂರು ತಾಲೂಕಿನ ಕೆಯ್ಯೂರುನಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ತಲಾ 2 ಕೋಟಿಯಂತೆ ಒಟ್ಟು 4 ಕೋಟಿ ರೂ.ಗಳ ಅನುದಾನ ಮಂಜೂರಾಗಿದೆ.
6 ರಿಂದ 10ನೇ ತರಗತಿಯ ಮಕ್ಕಳಿಗೆ 2021ರ ಅಕ್ಟೋಬರ್ 21 ರಿಂದ ಜಿಲ್ಲೆಯ ಎಲ್ಲಾ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ, ಅದರಂತೆ ನವೆಂಬರ್ 2 ರಿಂದ 1-5ನೇ ತರಗತಿಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಪ್ರಾರಂಭಿಸಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ.
2021-22ನೇ ಸಾಲಿನಲ್ಲಿ ಬಂಟ್ವಾಳ ತಾಲೂಕಿನ ವಿಟ್ಲ ಹಾಗೂ ದಡ್ಡಲಕಾಡು ಶಾಲೆಗಳನ್ನು ಪ್ರೌಢ ಶಾಲೆಗಳಾಗಿ ಮೇಲ್ದರ್ಜೆಗೇರಿಸಲಾಗಿದೆ.
ನೂತನ ರಾಷ್ಟ್ರೀಯ ಶಿಕ್ಷಣ ನೀತಿ- 2020 ರನ್ವಯ 70 ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ತೆರೆಯಲು ಕೇಂದ್ರ ಸರಕಾರ ಅನುಮೋದನೆ ನೀಡಿದೆ ಎಂದು ಹೇಳಿದರು.
ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ 930 ಕೋಟಿ ರೂ. ಗಳಿಗೆ ಒಟ್ಟು 45 ಕಾಮಗಾರಿಗಳು ಅನುಮೋದನೆಗೊಂಡಿವೆ. ಅವುಗಳಲ್ಲಿ ಸರಕಾರಿ ಕಟ್ಟಡಗಳಲ್ಲಿ ಎಲ್.ಇ.ಡಿ ಬಲ್ಪ್ ಅಳವಡಿಕೆ, ಕ್ಲಾಕ್ ಟವರ್ ನಿರ್ಮಾಣ, ವಿವಿಧ ರಸ್ತೆಗಳ ನಿರ್ಮಾಣ, ಇ-ಶೌಚಾಲಯ ಸೇರಿದಂತೆ ವಿವಿಧ 14 ಕಾಮಗಾರಿಗಳು ಪೂರ್ಣಗೊಂಡಿದ್ದು ಸಾರ್ವಜನಿಕರ ಸೇವೆಗೆ ಸಮರ್ಪಣೆಯಾಗಿವೆ. ಸರ್ವ ಸಮುದಾಯಗಳನ್ನೊಳಗೊಂಡ ಸರ್ವತೋಮುಖ ಬೆಳವಣಿಗೆ ಮತ್ತು ಹಲವಾರು ಯೋಜನೆಗಳ ಮೂಲಕ ಸಾಮಾಜಿಕ ನ್ಯಾಯದ ಪರಿಕಲ್ಪನೆಯೊಂದಿಗೆ ಎಲ್ಲರಿಗೂ ನ್ಯಾಯ ಒದಗಿಸಲು ನಮ್ಮ ಸರಕಾರ ಬದ್ಧವಾಗಿದೆ ಎಂದು ಅಂಗಾರ ತಿಳಿಸಿದರು.
ಕರ್ನಾಟಕದ ಭವ್ಯ ಪರಂಪರೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವತ್ತ ನಾವೆಲ್ಲರೂ ಶ್ರಮಿಸಬೇಕು. ಜಾತಿ, ಪಂಗಡಗಳ ಸಂಕುಚಿತ ಭಾವನೆಯಿಂದ ಹೊರಬಂದು ಸ್ನೇಹ ಹಾಗೂ ಸೌಹಾರ್ದತೆಯ ವಾತಾವರಣ ನಿರ್ಮಿಸಿ ದೇಶದ ಒಗ್ಗಟ್ಟು ಮತ್ತು ಏಕತೆಯನ್ನು ಕಾಪಾಡಿ ಬಲಿಷ್ಠರಾಷ್ಟ್ರ ನಿರ್ಮಾಣ ಮಾಡುವುದಕ್ಕೆ ಒಟ್ಟಾಗಿ ಸೇರಿ ಶ್ರಮಿಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಸದರಾದ ನಳೀನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಯು.ಟಿ. ಖಾದರ್, ಮೇಯರ್ ಪ್ರೇಮಾನಂದ ಶೆಟ್ಟಿ, ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರು, ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ಮೀನುಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷ ನಿತೀನ್ ಕುಮಾರ್, ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಸಂತೋಷ್ ರೈ ಬೋಳಿಯಾರ್, ಕರ್ನಾಟಕ ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ದಿ ನಿಗಮ ಮಂಡಳಿಯ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಭಗವಾನ್ ಸೋನಾವಣೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿದ್ದರು.
ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ನ.01ರ ಸೋಮವಾರ ನಗರದ ನೆಹರೂ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 66ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಜಿಲ್ಲೆಯ 57 ಸಾಧಕರಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ, ಗೌರವಿಸಲಾಯಿತು. ಈ ಬಾರಿ ಒಟ್ಟು 57 ಸಾಧಕರಿಗೆ ಈ ಬಾರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ.