ಕಲಬುರಗಿ: ಆನ್ ಲೈನ್ ಕ್ಲಾಸ್ ಎಂದು ಮನೆಯ ಕೋಣೆಗೆ ಹೋಗಿದ್ದ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಎರಡು ದಿನದ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಗುರುಚರಣ್ ಉಡುಪಾ(17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಗುರುಚರಣ್ ಉಡುಪಿಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ. ಕಳೆದ ಮಂಗಳವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಆನ್ ಲೈನ್ ಕ್ಲಾಸ್ ಎಂದು ಮನೆಯ ಕೋಣೆಗೆ ಹೋಗಿದ್ದ ವಿದ್ಯಾರ್ಥಿ ರೂಮ್ ಲಾಕ್ ಮಾಡಿಕೊಂಡಿದ್ದಾನೆ.
ಎರಡು ಗಂಟೆಯಾದರೂ ಮಗ ಹೊರಬರದ ಕಾರಣ ಪೋಷಕರು ಬಾಗಿಲು ಬಡಿದಿದ್ದಾರೆ. ಯಾವುದೇ ಪ್ರತಿಕ್ರಿಯೆ ಸಿಗದಿದ್ದಾಗ, ಗಾಬರಿಗೊಂಡ ಪೋಷಕರು ಬಾಗಿಲನ್ನು ಮುರಿದು ನೋಡಿದ್ದಾರೆ. ಈ ವೇಳೆ ಬಾಲಕ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾನೆ.
ವಿದ್ಯಾರ್ಥಿ ಆತ್ಮಹತ್ಯೆ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತ ವಿದ್ಯಾರ್ಥಿ ಅಂತ್ಯಸಂಸ್ಕಾರ ಈಗಾಗಲೆ ಮುಗಿದಿದ್ದು. ವಾಡಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆದರೆ ಈ ಬಗ್ಗೆ ಪಾಲಕರು ಪೊಲೀಸ್ ಠಾಣೆಗೆ ಯಾವುದೇ ದೂರು ನೀಡಿಲ್ಲ ಎಂದು ತಿಳಿದು ಬಂದಿದೆ.