Home ಟಾಪ್ ಸುದ್ದಿಗಳು ಪಿಸ್ತೂಲ್ ನಿಂದ ತಲೆಗೆ ಗುಂಡು ಹಾರಿಸಿಕೊಂಡು ಪಿಯು ವಿದ್ಯಾರ್ಥಿ ಶಂಕಾಸ್ಪದ ಸಾವು

ಪಿಸ್ತೂಲ್ ನಿಂದ ತಲೆಗೆ ಗುಂಡು ಹಾರಿಸಿಕೊಂಡು ಪಿಯು ವಿದ್ಯಾರ್ಥಿ ಶಂಕಾಸ್ಪದ ಸಾವು

ಬೆಂಗಳೂರು: ದ್ವಿತೀಯ ಪಿಯು ವಿದ್ಯಾರ್ಥಿಯೊಬ್ಬನ ಮೃತದೇಹ ಸಂಜಯನಗರದ ನಂದಿನಿ ಬೂತ್ ಬಳಿಯ ಪಾದಚಾರಿ ಮಾರ್ಗದಲ್ಲಿ ಪಿಸ್ತೂಲ್ನಿಂದ ತಲೆಗೆ ಗುಂಡಿಕ್ಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವ ಶಂಕೆ ಮೂಡಿದೆ.


ಸುದ್ದಿ ತಿಳಿದ ತಕ್ಷಣವೇ ಸದಾಶಿವ ನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ತನಿಖೆಯನ್ನು ಕೈಗೊಂಡಿದ್ದಾರೆ.
ಆರ್ ಟಿ ನಗರದ ಗಂಗಾ ಬೇಕರಿ ಬಳಿಯ ರಾಹುಲ್ ಭಂಡಾರಿ (17) ಮೃತಪಟ್ಟ ವಿದ್ಯಾರ್ಥಿ. ಮಿಲಿಟರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ರಾಹುಲ್ ಪ್ರತಿ ದಿನ ಬೆಳಗ್ಗಿನ ಜಾವ 3 ಗಂಟೆಗೆ ಎದ್ದು ಓದುತ್ತಿದ್ದ. ಅದರಂತೆ ಇಂದು ಬೆಳಗ್ಗೆ ಎದ್ದು ಕೆಲ ಹೊತ್ತು ಓದಿದ ಬಳಿಕ ಮನೆಯಿಂದ 4 ಗಂಟೆ ವೇಳೆ ವಾಕಿಂಗ್ ಗೆಂದು ಹೊರ ಬಂದಿದ್ದಾನೆ.


ಸುಮಾರು 5 ಗಂಟೆಯ ವೇಳೆ ತಲೆಯ ಎಡಭಾಗಕ್ಕೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಪೊಲೀಸರು, ಯುವಕನೇ ಶೂಟ್ ಮಾಡಿಕೊಂಡಿದ್ದಾನಾ? ಅಥವಾ ಬೇರೆ ಯಾರಾದರೂ ಶೂಟ್ ಮಾಡಿದ್ದಾರಾ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.


ರಾಹುಲ್ ಭಂಡಾರಿಯು ಭಗತ್ ಸಿಂಗ್ -ಬಾಬ್ನಾ ದಂಪತಿಯ ಪುತ್ರನಾಗಿದ್ದಾನೆ. ಭಗತ್ ಸಿಂಗ್ ಉತ್ತರಾಖಂಡ ಮೂಲದವರಾಗಿದ್ದು, 20 ವರ್ಷಗಳ ಹಿಂದೆ ನಗರದಕ್ಕೆ ಬಂದು ನೆಲೆಸಿದ್ದಾರೆ. ಭಗತ್ ಸಿಂಗ್ ನಿವೃತ್ತ ಸೈನಿಕ ಎಂದು ತಿಳಿದುಬಂದಿದೆ.
ಆರ್.ಟಿ. ನಗರದ ಗಂಗಾ ಬೇಕರಿ ಬಳಿ ಮನೆ ಮಾಡಿಕೊಂಡು ವಾಸವಾಗಿದ್ದರು. ರಾಹುಲ್ 10 ನೇ ತರಗತಿಯಲ್ಲಿ ಶೇ.90ರಷ್ಟು ಅಂಕ ಪಡೆದಿದ್ದ. ಮನೆಯಲ್ಲಿಯೂ ಓದಬೇಕು ಎನ್ನುವ ಒತ್ತಡ ಇರಲಿಲ್ಲ. ಆದರೂ ಮಾನಸಿಕ ಒತ್ತಡಕ್ಕೆ ಒಳಗಾಗಿರುವ ಶಂಕೆ ವ್ಯಕ್ತವಾಗಿದೆ.


ಘಟನೆ ಬಳಿಕ ಮೃತ ಯುವಕನ ತಾಯಿ ಪ್ರತಿಕ್ರಿಯಿಸಿದ್ದು, ಪ್ರತಿ ದಿನ ರಾತ್ರಿ ಮತ್ತು ಮುಂಜಾನೆ ವೇಳೆ ಓದುತ್ತಿದ್ದ. ಮಾನಸಿಕ ಒತ್ತಡ ಜಾಸ್ತಿಯಾದಾಗ ಹೊರಗಡೆ ವಾಕಿಂಗ್ ಮಾಡುತ್ತಿದ್ದ. ಇಂದು ಕೂಡ 4 ಗಂಟೆ ಸುಮಾರಿಗೆ ಹೊರಗಡೆ ಬಂದಿದ್ದ.
ಬೆಳ್ಳಗೆ 5 ಗಂಟೆಯಿಂದ ಸತತವಾಗಿ ಕರೆ ಮಾಡಿದರೂ ಫೋನ್ ರಿಸೀವ್ ಮಾಡಿರಲಿಲ್ಲ ಎಂದು ಕಣ್ಣೀರಿಟ್ಟರು.
ರಾತ್ರಿ ಊಟ ಮುಗಿಸಿ ಮಲಗಿದ್ದ ಆತ ಬೆಳಗಿನ ಜಾವ ಕೂಡ ಮನೆಯಿಂದ ಎದ್ದು ಹೊರಬಂದಿದ್ದಾನೆ. ನಾಲ್ಕು ಗಂಟೆಯಿಂದ ನಿರಂತರವಾಗಿ ಕರೆ ಮಾಡುತ್ತಿದ್ದರೂ ಕರೆ ಸ್ವೀಕರಿಸಲಿಲ್ಲ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿಪಿ ಅನುಚೇತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Join Whatsapp
Exit mobile version