ನ್ಯೂಯಾರ್ಕ್: ಅದೃಷ್ಟದ ಆಟ ಬಲ್ಲವರಾರು ಎಂಬ ಮಾತು ಮತ್ತೊಮ್ಮೆ ನಿರೂಪಿತವಾಗಿದೆ. ನ್ಯೂಯಾರ್ಕ್’ನ ನಸ್ಸಾವು ಕೌಂಟಿ ನಿವಾಸಿ ಜುವಾನ್ ಹೆರ್ನಾಂಡಿಸ್ ಎಂಬಾತ ಮೂರು ವರ್ಷದ ಅವಧಿಯಲ್ಲಿ ಎರಡನೇ ಬಾರಿಗೆ ಬರೋಬ್ಬರಿ 10 ಮಿಲಿಯನ್ ಡಾಲರ್, ಅಂದಾಜು 75, 74, 08, 500 ಕೋಟಿ ರೂಪಾಯಿ ಮೊತ್ತವನ್ನು ಲಾಟರಿ ಮೂಲಕ ಗೆದ್ದು ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದ್ದಾನೆ.
ಫೆಬ್ರವರಿ ತಿಂಗಳ ಡಿಲಕ್ಸ್ ಸ್ಕ್ರ್ಯಾಚ್- ಆಫ್ ಗೇಮ್ ಲಾಟರಿಯಲ್ಲಿ ಹೆರ್ನಾಂಡಿಸ್ ಮತ್ತೊಮ್ಮೆ ಭಾರಿ ಮೊತ್ತದ ವಿಜೇತರಾಗಿ ಹೊರಹೊಮ್ಮಿದ್ದಾರೆ.
ನ್ಯೂಯಾರ್ಕ್ ನಗರದ ಈ ಪ್ರಸಿದ್ಧ ಲಾಟರಿಯನ್ನು 2019ರಲ್ಲಿ ಹೆರ್ನಾಂಡಿಸ್ ಮೊದಲ ಬಾರಿಗೆ ಗೆದ್ದಿದ್ದರು. ಎರಡನೇ ಬಾರಿಗೆ ಲಾಟರಿ ಗೆದ್ದಿರುವ ಕುರಿತು ಪ್ರತಿಕ್ರಿಯಿಸಿರುವ ಜುವಾನ್, 2019ರಲ್ಲಿ ತಾನು ಗೆದ್ದ ಮೊತ್ತವನ್ನು ಇನ್ನೂ ಖರ್ಚು ಮಾಡಿಲ್ಲ ಎಂದು ತಿಳಿಸಿದ್ದಾರೆ. ಸರ್ಕಾರದ ತೆರಿಗೆಯನ್ನು ಹೊರತುಪಡಿಸಿ 6, 510,000 ಮಿಲಿಯನ್ ಡಾಲರ್ ಮೊತ್ತವನ್ನು ಜುವಾನ್ ಜೇಬಿಗಿಳಿಸಿದ್ದಾರೆ. ಆದರೆ ಎರಡನೇ ಬಾರಿಗೆ ದೊರೆತಿರುವ ಮೊತ್ತವನ್ನು ಕಷ್ಟದಲ್ಲಿರುವವರಿಗೆ ದಾನ ಮಾಡಲು ನಿರ್ಧರಿಸಿದ್ದೇನೆ ಎಂದಿದ್ದಾರೆ. ಜುವಾನ್ ಅವರು ನೀಡಿದ ಮೊತ್ತದಿಂದ ಟ್ರಕ್ ಖರೀದಿಸಿರುವುದಾಗಿ ವೆಸ್ಲಿ ಹಂಟರ್ ಎಂಬುವವರು ಫೇಸ್’ಬುಕ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಡಿಲಕ್ಸ್ ಸ್ಕ್ರ್ಯಾಚ್- ಆಫ್ ಗೇಮ್ ಲಾಟರಿ ಆಯೋಜಕರ ಪ್ರಕಾರ ಸರಿಸುಮಾರು 4.6 ಮಿಲಿಯನ್ ಜನರು ಪ್ರತಿ ತಿಂಗಳು ಈ ಲಾಟರಿ ಖರೀಸುತ್ತಾರೆ ಎಂದು ಮಾಹಿತಿ ನೀಡಿದೆ. ಇದೇ ಮೊದಲ ಬಾರಿಗೆ ಒಬ್ಬನೇ ವ್ಯಕ್ತಿ ಎರಡನೇ ಬಾರಿಗೆ ವಿಜೇತನಾಗಿರುವುದಾಗಿ ಸಂಸ್ಥೆ ತಿಳಿಸಿದೆ.