ಹಾಸನ: ಹಾಸನ- ಸಕಲೇಶಪುರ ತಾಲ್ಲೂಕಿನ ಪಶ್ಚಿಮ ಘಟ್ಟದ ಕಾಳ್ಗಿಚ್ಚಿಗೆ ಸಿಲುಕಿ ಬೆಂದು ಹೋಗಿದ್ದ ಫಾರೆಸ್ಟ್ ಗಾರ್ಡ್ ಸುಂದರೇಶ್ ಚಿಕಿತ್ಸೆ ಫಲಿಸದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಫೆಬ್ರವರಿ 16ರ ಮಧ್ಯಾಹ್ನ ಕಾಡುಮನೆ ಎಸ್ಟೇಟ್ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದ ಕಾಳ್ಗಿಚ್ಚು ಆರಿಸಲು ಡಿಆರ್’ಎಫ್’ಓ ಮಂಜುನಾಥ ನೇತೃತ್ವದಲ್ಲಿ ತೆರಳಿದ್ದ ಆರು ಜನ ಅರಣ್ಯ ಇಲಾಖೆ ಸಿಬ್ಬಂದಿ ವೇಗವಾಗಿ ಹಬ್ಬುತ್ತಿದ್ದ ಬೆಂಕಿ ಮಧ್ಯೆ ಸಿಲುಕಿಕೊಂಡಿದ್ದರು.
ಬೆಂಕಿಗೆ ಸಿಲುಕಿ ಡಿಆರ್’ಎಫ್’ಓ ಮಂಜುನಾಥ, ಫಾರೆಸ್ಟ್ ಗಾರ್ಡ್ ಸುಂದರೇಶ್, ವಾಚರ್’ಗಳಾದ ತುಂಗೇಶ್ ಮತ್ತು ಮಹೇಶ್’ ಗಾಯಗೊಂಡಿದ್ದರು.
ಬೆಂಕಿಯಲ್ಲಿ ಬಹುತೇಕ ಬೆಂದು ಹೋಗಿದ್ದ ಸುಂದರೇಶ್ ಹಾಗೂ ಮಂಜುನಾಥ ಅವರನ್ನು ರಸ್ತೆ ಸಂಪರ್ಕ ಇಲ್ಲದ ಸ್ಥಳದಿಂದ ಅಡ್ಡೆಯಲ್ಲಿ ಹೊತ್ತು ತಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಾಸನದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಝೀರೊ ಟ್ರಾಫಿಕ್ ಮೂಲಕ ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿತ್ತು.
ಶೇಕಡಾ 80ರಷ್ಟು ಸುಟ್ಟಗಾಯಳಾಗಿದ್ದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಸುಂದರೇಶ್ ಕಳೆದ ರಾತ್ರಿ ಸಾವನ್ನಪ್ಪಿದ್ದಾರೆ.
ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಸುಂದರೇಶ್ ಅವರಿಗೆ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.