ಅಮೃತಸರ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ನದಿಯ ಕಲುಷಿತ ನೀರನ್ನು ಕುಡಿದಿದ್ದರಿಂದ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿದೆ ಎಂಬ ಉಹಾಪೋಹ ಹರಿದಾಡುತ್ತಿದ್ದು, ಸದ್ಯ ನದಿ ನೀರನ್ನು ಕುಡಿಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನದಿ ನೀರನ್ನು ಕುಡಿದ ಕೆಲವು ದಿನಗಳಲ್ಲೇ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಹೊಟ್ಟೆಯ ಸೋಂಕು ಸಮಸ್ಯೆಯಿಂದ ಬಳಲಲಾರಂಭಿಸಿದ್ದು, ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ.
ನದಿಯ ನೀರನ್ನು ಲೋಟದಲ್ಲಿ ತುಂಬಿಸಿ ಕುಡಿಯುತ್ತಿರುವ ವೀಡಿಯೋವೊಂದನ್ನು ಆಮ್ ಆದ್ಮಿ ಪಕ್ಷದ ಪಂಜಾಬ್ ಘಟಕ ಟ್ವೀಟ್ ಮಾಡಿತ್ತು. ಬೆಂಬಲಿಗರ ಜೈಕಾರಗಳ ಮಧ್ಯೆ ಮುಖ್ಯಮಂತ್ರಿ ಮಾನ್ ಅವರು ನದಿಯಿಂದ ಒಂದು ಲೋಟ ನೀರನ್ನು ಕುಡಿಯುತ್ತಿರುವುದು ಸೆರೆಯಾಗಿದೆ. ಇದೇ ಮುಖ್ಯಮಂತ್ರಿಗಳ ಅನಾರೋಗ್ಯದ ಮೂಲ ಎಂದು ಪ್ರಚಾರವಾಗುತ್ತಿದೆ.
ಆದರೆ ಪಕ್ಷದ ಮುಖಂಡರು ಇದನ್ನು ಅಲ್ಲಗೆಳೆದಿದ್ದಾರೆ. ನದಿಯ ನೀರನ್ನು ಸೇವಿಸಿರುವುದರಿಂದ ಮುಖ್ಯಮಂತ್ರಿ ಮಾನ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎಂಬ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪಕ್ಷದ ಮುಖಂಡರು, ನದಿ ನೀರು ಕುಡಿಯುತ್ತಿರುವ ಘಟನೆ ಮತ್ತು ಅವರ ಆರೋಗ್ಯ ಸಮಸ್ಯೆಗೆ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ಅವರು ಸಾಮಾನ್ಯ ತಪಾಸಣೆಗೆ ಆಸ್ಪತ್ರೆಗೆ ಹೋಗಿದ್ದರು ಎಂದು ವಾದಿಸಿದ್ದಾರೆ.