Home ಟಾಪ್ ಸುದ್ದಿಗಳು ನಿರಾಶಾದಾಯಕ ಬಜೆಟ್, ಜನರ ನಿರೀಕ್ಷೆ ಹುಸಿ – ದಿನೇಶ್ ಗೂಳಿಗೌಡ

ನಿರಾಶಾದಾಯಕ ಬಜೆಟ್, ಜನರ ನಿರೀಕ್ಷೆ ಹುಸಿ – ದಿನೇಶ್ ಗೂಳಿಗೌಡ

ಬೆಂಗಳೂರು: ಇದೊಂದು ನಿರಾಶಾದಾಯಕ ಬಜೆಟ್ ಆಗಿದೆ. ಮಂಡ್ಯ ಜಿಲ್ಲೆಯ ಜನತೆಯ ನಿರೀಕ್ಷೆಯನ್ನು ಈ ಸರ್ಕಾರ ಹುಸಿಗೊಳಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಟೀಕಿಸಿದ್ದಾರೆ.

ಮಂಡ್ಯ ಜಿಲ್ಲೆಯ ಬಹುಪಾಲು ವರ್ಗದ ಜೀವನೋಪಾಯಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅನುಕೂಲ ಮಾಡಿಕೊಡುತ್ತಿದ್ದ ಬಹು ಆಕಾಂಕ್ಷಿತ ಮೈಸೂರು ಸಕ್ಕರೆ ಕಾರ್ಖಾನೆಗೆ ಘೋಷಿಸಿರುವ 50 ಕೋಟಿ ರೂಪಾಯಿ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಯಂತ್ರೋಪಕರಣ ದುರಸ್ತಿಗೆ ಈ ಹಣವನ್ನು ಒದಗಿಸುವುದಾಗಿ ಹೇಳಲಾಗಿದೆ. ಆದರೆ, ಕಾರ್ಖಾನೆ ಅಭಿವೃದ್ಧಿಗೆ ಈ ಹಣ ಯಾವುದಕ್ಕೂ ಸಾಲದು ಎಂಬುದು ತಿಳಿಯುತ್ತದೆ. ಹಾಲಿ ಕಾರ್ಖಾನೆ ಅಭಿವೃದ್ಧಿಗೆ 200 ಕೋಟಿ ರೂಪಾಯಿಯ ಅನುದಾನವನ್ನು ಕೇಳಿದ್ದೆವು. ಅಲ್ಲದೆ, ಎಥೆನಾಲ್ ಘಟಕವನ್ನು ಸ್ಥಾಪಿಸಿ ಕಾರ್ಖಾನೆಯನ್ನು ಲಾಭದಾಯಕವನ್ನಾಗಿ ಮಾಡಲೂ ಕೇಳಿಕೊಂಡಿದ್ದೆವು. ಆದರೆ, ಸರ್ಕಾರಕ್ಕೆ ಇದಾವುದರ ಮೇಲೂ ಆಸಕ್ತಿ ಇಲ್ಲ ಎಂಬುದು ಈ ಬಜೆಟ್ ಮೂಲಕ ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.

ನಾನು ಮುಖ್ಯಮಂತ್ರಿಯವರಲ್ಲಿ ಮನವಿ ಈಗಲೂ ಕಾಲಾವಕಾಶ ಮಿಂಚಿಲ್ಲ. ತಾವು ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಇದನ್ನು ಮರುಪರಿಶೀಲನೆ ಮಾಡಿ 200 ಕೋಟಿ ರೂ. ಅನುದಾನ ಮೀಸಲಿಡಬೇಕು. ಜೊತೆಗೆ ಎಥೆನಾಲ್ ಘಟಕ ಸ್ಥಾಪನೆಗೆ ಕ್ರಮ ವಹಿಸಬೇಕು ಎಂದು ಮನವಿ ಮಾಡುತ್ತೇನೆ. ವಿಶ್ವೇಶ್ವರಯ್ಯ ನಾಲೆ ಆಧುನೀಕರಣಕ್ಕೆ 500 ಕೋಟಿ ರೂಪಾಯಿಯನ್ನು ಕೇಳಲಾಗಿತ್ತು. ಅದನ್ನೂ ನೀಡದಿರುವುದು ತೀವ್ರ ಬೇಸರ ತಂದಿದೆ. ಇದನ್ನೂ ಸಹ ಮುಖ್ಯಮಂತ್ರಿಯವರು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಗುಣಮಟ್ಟದ ರೈತ ತರಬೇತಿ ಕೇಂದ್ರಕ್ಕೋಸ್ಕರ ಅಂತಾರಾಷ್ಟ್ರೀಯ ಮಟ್ಟದ ರೈತ ಭವನವನ್ನು ಸ್ಥಾಪಿಸುವಂತೆ ಮನವಿ ಮಾಡಲಾಗಿತ್ತು. ಆದರೆ, ಸರ್ಕಾರ ಇದನ್ನು ಹುಸಿಗೊಳಿಸಿದೆ. ಕೋವಿಡ್ ಸಮಯದಲ್ಲಿ ಮೃತಪಟ್ಟ ರೈತರು ಸಹಕಾರಿ ಬ್ಯಾಂಕುಗಳಲ್ಲಿ ಮಾಡಿರುವ ಸಾಲವನ್ನು ಮನ್ನಾ ಮಾಡಬೇಕಿತ್ತು. ಆದರೆ, ಅದರ ಬಗ್ಗೆ ಸರ್ಕಾರ ಯಾವುದೇ ಪ್ರಸ್ತಾಪ ಮಾಡಿಲ್ಲ. ಇದನ್ನು ಸಹ ಬಜೆಟ್ ಮೇಲಿನ ಚರ್ಚೆ ಸಮಯದಲ್ಲಿ ಮಾನ್ಯ ಮುಖ್ಯಮಂತ್ರಿಯವರು ಮರುಪರಿಶೀಲಿಸಿ ಕೋವಿಡ್ ಸಮಯದಲ್ಲಿ ಮೃತಪಟ್ಟ ರೈತರ ಸಾಲ ಮನ್ನಾ ಮಾಡುವ ಮೂಲಕ ರೈತ ಕುಟುಂಬಗಳಿಗೆ ನೆರವಾಗಬೇಕು.

ಮಂಡ್ಯ ಜಿಲ್ಲೆ ಸೇರಿದಂತೆ ಹಳೇ ಮೈಸೂರು ಭಾಗಕ್ಕೆ ವಿಶೇಷವಾದಂತಹ ಯಾವುದೇ ರೀತಿಯ ಕೊಡುಗೆಯನ್ನು ನೀಡಿಲ್ಲ. ಯಾವುದೇ ರೀತಿಯ ಕಾರ್ಯಕ್ರಮವನ್ನು ಘೋಷಣೆ ಮಾಡದೆ ಮುಖ್ಯಮಂತ್ರಿಯವರು ನಿರ್ಲಕ್ಷ್ಯ ವಹಿಸಿದ್ದಾರೆ. ಇನ್ನು ರೈತರ ಆದಾಯವನ್ನು ದ್ವಿಗುಣ ಮಾಡುತ್ತೇವೆ ಎಂದು ಹೇಳುತ್ತಾ ಬರಲಾಗುತ್ತಿದೆಯೇ ಹೊರತು ಅಂತಹ ಯಾವುದೇ ಘೋಷಣೆಗಳು, ನಿರ್ಧಾರಗಳು ಈ ಬಜೆಟ್ನಲ್ಲಿ ಕಾಣಿಸಲಿಲ್ಲ. ಹೀಗಾಗಿ ಇದು ನಿರಾಶಾದಾಯಕ ಬಜೆಟ್ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version