ಢಾಕಾ: ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಕಾರದ ಕ್ರಮವನ್ನು ಟೀಕೆ ಮಾಡಿದ್ದ ವಿಶ್ವವಿದ್ಯಾಲಯದ ವಿದ್ಯಾರ್ಥಿಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ತೀರ್ಪು ನೀಡಿರುವ ಬಾಂಗ್ಲಾದೇಶದ ನ್ಯಾಯಾಲಯವೊಂದು, ಕೃತ್ಯದಲ್ಲಿ ಭಾಗಿಯಾದ 20 ವಿದ್ಯಾರ್ಥಿಗಳಿಗೆ ಮರಣದಂಡನೆ ಹಾಗೂ ಐವರು ವಿದ್ಯಾರ್ಥಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರತಿಷ್ಠಿತ ಬಾಂಗ್ಲಾದೇಶ ಇಂಜಿನಿಯರಿಂಗ್ ಹಾಗೂ ತಂತ್ರಜ್ಞಾನ ವಿಶ್ವವಿದ್ಯಾಲಯ (BUET)ದ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದ 21 ವರ್ಷದ ಅಬ್ರಾರ್ ಫಹದ್’ನನ್ನು, ಡಿಸೆಂಬರ್ 7, 2019ರಂದು ವಿದ್ಯಾರ್ಥಿಗಳ ಗುಂಪೊಂದು ಕ್ರೂರವಾಗಿ ಥಳಿಸಿ ಹತ್ಯೆಗೈಯ್ದಿದ್ದರು. ಭಾರತದೊಂದಿಗೆ ನೀರು ಹಂಚಿಕೆ ಒಪ್ಪಂದಕ್ಕಾಗಿ ಸಹಿ ಹಾಕಿದ್ದ ಅಂದಿನ ಪ್ರಧಾನಿ ಶೇಖ್ ಹಸೀನಾರ ನಡೆಯನ್ನು ಟೀಕಿಸಿ, ಅಬ್ರಾರ್ ಫಹದ್ ಫೇಸ್ಬುಕ್’ನಲ್ಲಿ ಪೋಸ್ಟ್ ಹಾಕಿದ್ದ. ಇದಾದ ಕೆಲವೇ ಗಂಟೆಗಳಲ್ಲಿ ಫಹದ್’ನ ಮೃತದೇಹವು ವಿಶ್ವವಿದ್ಯಾಲಯದ ವಸತಿ ನಿಲಯದಲ್ಲಿ ಪತ್ತೆಯಾಗಿತ್ತು.
ಬಾಂಗ್ಲಾದೇಶದ ಆಡಳಿತರೂಢ ಅವಾಮಿ ಲೀಗ್ನ ವಿದ್ಯಾರ್ಥಿ ಸಂಘಟನೆಯಾದ ಛಾತ್ರಾ ಲೀಗ್’ನ ಸದಸ್ಯರಾಗಿದ್ದ 25 ವಿದ್ಯಾರ್ಥಿಗಳು ಸುಮಾರು ಆರು ಗಂಟೆಗಳ ಕಾಲ ಕ್ರಿಕೆಟ್ ಬ್ಯಾಟ್ ಹಾಗೂ ಇತರೆ ಆಯುಧಗಳಿಂದ ಅಬ್ರಾರ್ ಫಹದ್ನನ್ನು ಥಳಿಸಿದ್ದರು.
ತೀರ್ಪು ಪ್ರಕಟಿಸಿದ ಢಾಕಾ ತ್ವರಿತ ವಿಚಾರಣೆ ನ್ಯಾಯಮಂಡಳಿ-1 ನ್ಯಾಯಾಧೀಶ ಅಬು ಝಫರ್ ಮುಹಮ್ಮದ್, ನ್ಯಾಯಾಲಯವು ಅಪರಾಧಿಗಳಿಗೆ ಗರಿಷ್ಠ ಶಿಕ್ಷೆಯನ್ನೇ ವಿಧಿಸಿದೆ. ಇಂತಹ ಘಟನೆಗಳು ಇನ್ನೆಂದಿಗೂ ನಡೆಯದಿರಲು ಈ ತೀರ್ಪು ಸಹಕಾರಿಯಾಗಲಿದೆ ಎಂದು ಹೇಳಿದರು. ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಮೃತ ಫಹದ್ ತಂದೆ ಬರ್ಖತ್ ಉಲ್ಲಾ, ನನ್ನ ಮಗನನ್ನು ಮರಳಿ ಪಡೆಯಲು ಸಾಧ್ಯವಿಲ್ಲ, ಆದರೆ ಈ ತೀರ್ಪು ನನ್ನ ಕುಟುಂಬಕ್ಕೆ ಸಾಂತ್ವನ ನೀಡಲಿದೆ. ಈ ಆದೇಶದಿಂದ ನಾನು ತೃಪ್ತನಾಗಿದ್ದೇನೆ. ಶೀಘ್ರದಲ್ಲೇ ಅವರಿಗೆ ಶಿಕ್ಷೆ ವಿಧಿಸಲಾಗುತ್ತದೆ ಎಂದು ನಂಬಿದ್ದೇನೆ ಎಂದು ಹೇಳಿದರು.