ಲಕ್ನೋ: ದಾವೂದ್ ಅಲಿ ತ್ಯಾಗಿ ಎಂಬ 50 ವರ್ಷದ ಮುಸ್ಲಿಂ ವೃದ್ಧನ ಮೇಲೆ ಗುಂಪು ದಾಳಿ ನಡೆಸಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯ ವಿನಯ್‌ಪುರದಲ್ಲಿ ನಡೆದಿದ್ದು,ತಡವಾಗಿ ಬೆಳಕಿಗೆ ಬಂದಿದೆ . ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ನಾಲ್ವರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.
ದಾವೂದ್ ಅಲಿ ತ್ಯಾಗಿ ರೈತರಾಗಿದ್ದು ತನ್ನ ಕುಟುಂಬದೊಂದಿಗೆ ವಿನಯ್‌ಪುರದಲ್ಲಿ ವಾಸಿಸುತ್ತಿದ್ದು, ಇವರ ಮೂವರು ಮಕ್ಕಳು ದೆಹಲಿಯಲ್ಲಿ ಓದುತ್ತಿದ್ದಾರೆ.
ಸೆಪ್ಟೆಂಬರ್ 2ರಂದು ರಾತ್ರಿ 10 ಗಂಟೆ ಸುಮಾರಿಗೆ ಏಳೆಂಟು ಬೈಕ್‌ಗಳಲ್ಲಿ ಬಂದ ಸಂಘಪರಿವಾರದ ಕಾರ್ಯಕರ್ತರು ಎನ್ನಲಾದ ಸುಮಾರು 22 ಮಂದಿಯನ್ನೊಳಗೊಂಡ ದುಷ್ಕರ್ಮಿಗಳ ತಂಡ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿ ದಾವೂದ್ ಅಲಿ ಯವರ ಮೇಲೆ ತಡರಾತ್ರಿ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಮಾರಣಾಂತಿಕವಾಗಿ ಗಾಯಗೊಳಿಸಿದ್ದಾರೆ ಎಂದು ಅವರ ಮಗ ಶಾರುಖ್ ತಿಳಿಸಿದರು.
ದಾಳಿಯ ನಂತರ ದಾವೂದ್ ಅಲಿ ತ್ಯಾಗಿಯವರನ್ನು ಚಿಕಿತ್ಸೆಗಾಗಿ ಮೀರತ್‌ನ ಕುಟುಂಬ ಆರೋಗ್ಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸೆಪ್ಟೆಂಬರ್ 5 ರಂದು, ಖೇಕ್ರಾ ಪೊಲೀಸರು ತ್ಯಾಗಿ ಅವರ ಹತ್ಯೆಗೆ ಸಂಬಂಧಿಸಿದಂತೆ ನಿಕ್ಕಿ ಅಲಿಯಾಸ್ ವಿಕ್ಕಿ, ಹರೀಶ್, ಮೋಹಿತ್ ಮತ್ತು ದಿಲೀಪ್- ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿರುವುದಾಗಿ ಹೇಳಿಕೆ ನೀಡಿದ್ದಾರೆ.
ಈ ಹತ್ಯೆ ಘಟನೆಯು ಮುಸ್ಲಿಮರನ್ನು ಹೆದರಿಸುವ ಯೋಜನೆಯ ಭಾಗವಾಗಿತ್ತು ಎಂದು ತ್ಯಾಗಿ ಅವರ ಕುಟುಂಬದ ಸದಸ್ಯರು ಹಾಗೂ ಸ್ಥಳೀಯ ಸಾಮಾಜಿಕ ಹೋರಾಟಗಾರರು ಹೇಳಿದ್ದಾರೆ. ತ್ಯಾಗಿ ಹತ್ಯೆಗೂ ಮುನ್ನ ಬಾಘೋಟ್ ಎಂಬಲ್ಲಿ ಸಭೆ ನಡೆದಿದ್ದು ಮುಸ್ಲಿಮರಲ್ಲಿ ಭಯವನ್ನು ಹುಟ್ಟಿಸುವುದು ಅವರ ಮುಖ್ಯ ಉದ್ದೇಶವಾಗಿತ್ತು ಎಂದು ತಿಳಿದು ಬಂದಿದೆ.