►ಧರ್ಮಾಧಾರಿತ ಕೊಲೆಗಳ ತನಿಖೆಗೆ ಎಸ್ ಐಟಿ ರಚಿಸುವಂತೆ ರಮಾನಾಥ ರೈ ಆಗ್ರಹ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧರ್ಮಾಧಾರಿತವಾಗಿ ನಡೆದ ಮೂವರು ಯುವಕರ ಹತ್ಯೆಗಳ ತನಿಖೆ ಹಾಗೂ ಕುಟುಂಬಗಳಿಗೆ ನೀಡಬೇಕಾದ ಸಾಂತ್ವನ ಹಾಗೂ ಪರಿಹಾರ ವಿತರಣೆಯಲ್ಲಿ ಬಹಿರಂಗ ತಾರತಮ್ಯ ನೀತಿಯನ್ನು ಖಂಡಿಸಿ, ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಜಿಲ್ಲೆಯ ನಾಗರಿಕರ ಘನತೆ ಗೌರವಕ್ಕೆ ಚ್ಯುತಿ ತಂದ ರಾಜ್ಯ ಬಿಜೆಪಿ ಸರಕಾರದ ಅಮಾನವೀಯ ನಡೆಯ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ವತಿಯಿಂದ ಮಂಗಳೂರು ಪುರಭವನದ ಮುಂಭಾಗ ಮಂಗಳವಾರ ಮೌನ ಪ್ರತಿಭಟನೆ ನಡೆಯಿತು. ಮೌನ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.
ಈ ಸಮಯದಲ್ಲಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ, ಜಿಲ್ಲೆಯಲ್ಲಿ ಮೂವರು ಯುವಕರ ಹತ್ಯೆ ನಡೆದಿದೆ. ಆದರೆ ಮೂರು ಪ್ರಕರಣಗಳನ್ನು ಸಮಾನವಾಗಿ ಕಾಣಬೇಕಾಗಿದ್ದ ರಾಜ್ಯ ಬಿಜೆಪಿ ಸರಕಾರವು ಧರ್ಮದ ಆಧಾರದಲ್ಲಿ ತಾರತಮ್ಯ ಮಾಡಿರುವುದು ಖಂಡನೀಯ ಎಂದು ಹೇಳಿದರು.
ಕೊಲೆಯಾದವರ ಧರ್ಮ ನೋಡದೇ ನ್ಯಾಯ ನೀಡಬೇಕು ಎಂದು ಮನವಿ ಮಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 10 ವರ್ಷಗಳಿಂದ ನಡೆದಿರುವ ಧರ್ಮಾಧಾರಿತ ಹತ್ಯೆಗಳ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಬೇಕು ಎಂದು ಆಗ್ರಹಿಸಿದರು.
ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸಾಹುಲ್ ಹಮೀದ್ ಮಾತನಾಡಿ, ಕೊಲೆಯಾದ ಮಸೂದ್, ಫಾಝಿಲ್ ಮನೆಗಳು ಮುಖ್ಯಮಂತ್ರಿಗಳಿಗೆ ಕಾಣಿಸದ್ದು ಮಹಾ ತಾರತಮ್ಯ ಎಂದು ಟೀಕಿಸಿದರು. ಬಳಿಕ ರಾಜ್ಯಪಾಲರಿಗೆ ಸಲ್ಲಿಸುವ ಮನವಿಯನ್ನು ಓದಿದರು.
ಮೌನ ಪ್ರತಿಭಟನೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಮೊಯ್ದೀನ್ ಬಾವ, ಜೆ.ಆರ್ ಲೋಬೋ, ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ಶಶಿಧರ್ ಹೆಗಡೆ, ಮಮತಾ ಗಟ್ಟಿ, ಎಂ.ಎಸ್ ಮಹಮ್ಮದ್, ಪ್ರಕಾಶ್ ಸಾಲಿಯಾನ್, ವಿಶ್ವಾಸ್ ದಾಸ್, ಮತ್ತಿತರ ನಾಯಕರು ಭಾಗವಹಿಸಿದ್ದರು.
ಕೊಲೆಯಾದ ಫಾಝಿಲ್ ತಂದೆ, ಮಸೂದ್ ತಾಯಿ ಉಪಸ್ಥಿತರಿದ್ದರು.