ಶಯೋಪುರ: ಚೀತಾಗಳನ್ನು ರಕ್ಷಿಸಿ. ಮಾನವ–ಪ್ರಾಣಿ ಸಂಘರ್ಷವನ್ನು ನಿಯಂತ್ರಿಸಿ. ಈ ಪ್ರಾಣಿಗಳು ತಮ್ಮ ಹೊಸ ಆವಾಸಸ್ಥಾನಕ್ಕೆ ಒಗ್ಗಿಕೊಳ್ಳುವವರೆಗೆ ಯಾರೊಬ್ಬರನ್ನೂ ಕೆಎನ್‌ಪಿ ಒಳಗೆ ಬಿಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ’ಚೀತಾ ಮಿತ್ರ’ರೊಂದಿಗೆ ತಿಳಿಸಿದ್ದಾರೆ.
ಚೀತಾ ಯೋಜನೆಯಡಿ ನಮೀಬಿಯಾದಿಂದ ತರಲಾದ ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಬಿಟ್ಟ ಬಳಿಕ ‘ಚೀತಾ ಮಿತ್ರ’ರೊಂದಿಗೆ ಸಮಾಲೋಚನೆ ನಡೆಸಿದ ಮೋದಿ ‘ಇಲ್ಲಿ ರಚಿಸಲಾಗಿರುವ ಆವರಣಕ್ಕೆ ಚೀತಾಗಳು ಒಗ್ಗಿಕೊಳ್ಳಲು ಸಮಯ ಬೇಕಾಗುತ್ತದೆ. ನಂತರ ಅವು ಅರಣ್ಯಕ್ಕೆ ಒಗ್ಗಿಕೊಳ್ಳಬೇಕಿದೆ ಎಂಬುದು ನಿಮಗೆ ತಿಳಿದಿರಬೇಕು. ರಾಜಕೀಯ ನಾಯಕರು, ಮಾಧ್ಯಮದವರು, ಅಧಿಕಾರಿಗಳು, ಸಂಬಂಧಿಕರು ಮಾತ್ರವಲ್ಲ ನನಗೂ ಉದ್ಯಾನದೊಳಗೆ ಪ್ರವೇಶ ನಿರಾಕರಿಸುವುದು ನಿಮ್ಮ ಕರ್ತವ್ಯ’ ಎಂದು ತಿಳಿಸಿದ್ದಾರೆ.
ಚೀತಾ ಬಿಡುಗಡೆಗೊಳಿಸಿ ಮಾತನಾಡಿರುವ ಪ್ರಧಾನಿ, ಭಾರತದಲ್ಲಿ ಏಳು ದಶಕಗಳ ಹಿಂದೆಯೇ ಚೀತಾಗಳು ನಿರ್ನಾಮವಾಗಿವೆ. ದೇಶದಲ್ಲಿ ಚೀತಾಗಳ ಸಂತತಿಯನ್ನು ಬೆಳೆಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಚೀತಾಗಳು ಇಲ್ಲಿನ ಆವಾಸಸ್ಥಾನಕ್ಕೆ ಒಗ್ಗಿಕೊಂಡ ಬಳಿಕ ಕೆಎನ್‌ಪಿ ಒಳಗೆ ಪ್ರವೇಶ ನೀಡಲಾಗುವುದು ಎಂದು ಜನರಿಗೆ ಮನವರಿಕೆ ಮಾಡುವಂತೆ ತಿಳಿಹೇಳಿದರು.
‘ಚೀತಾ ಮಿತ್ರರು’ ಎಂದರೆ ಚೀತಾಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಎಚ್ಚರಿಕೆ ವಹಿಸುವ ಸಲುವಾಗಿ ತರಬೇತಿ ನೀಡಲಾಗಿರುವ 400 ಯುವಕರ ತಂಡವಾಗಿದೆ.
ಐದು ಹೆಣ್ಣು ಮತ್ತು ಮೂರು ಗಂಡು ಸೇರಿ ಒಟ್ಟು 8 ಚೀತಾಗಳನ್ನು ನಮೀಬಿಯಾದಿಂದ ಗ್ವಾಲಿಯರ್‌ಗೆ ಬೋಯಿಂಗ್ ವಿಮಾನದಲ್ಲಿ ಶನಿವಾರ ಕರೆತರಲಾಗಿದೆ. ಈ ಪ್ರಾಣಿಗಳನ್ನು ಕರೆತರಲು ಅನುಕೂಲವಾಗುವಂತೆ ವಿಮಾನವನ್ನು ಮಾರ್ಪಾಡು ಮಾಡಲಾಗಿತ್ತು.