ಬೆಂಗಳೂರು: ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆಯನ್ನು ನಾಲ್ಕು ವರ್ಷದಿಂದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮುಚ್ಚುವ ಹಂತಕ್ಕೆ ತಂದಿದ್ದವು. ಇದರ ಹಿಂದೆ ರಿಯಲ್ ಎಸ್ಟೇಟ್ ಉದ್ಯಮದ ದೊಡ್ಡ ಮಾಫಿಯಾವೇ ಕೆಲಸ ಮಾಡಿತ್ತು. ಇದು ನನ್ನ ಗಮನಕ್ಕೆ ಬಂದಿದ್ದರಿಂದ ಜಕ್ಕೂರು ವೈಮಾನಿಕ ತರಬೇತಿ ಶಾಲೆಯನ್ನು ಪುನಾರಂಭ ಮಾಡಿ, ನೂರು ಜನ ನಿರುದ್ಯೋಗಿಗಳಿಗೆ ಪೈಲಟ್ ತರಬೇತಿ ನೀಡಿ ಉದ್ಯೋಗ ದೊರಕಿಸುವ ಕೆಲಸ ಮಾಡಲಾಗುತ್ತಿದೆ ಎಂದು ಯುವಜನ ಮತ್ತು ಕ್ರೀಡಾ ಸಚಿವ ಡಾ.ನಾರಾಯಣ ಸ್ವಾಮಿ ತಿಳಿಸಿದ್ದಾರೆ.
ನಿಯಮ ಉಲ್ಲಂಘಿಸಿ ನಿರ್ಮಿಸಿರುವ ಖಾಸಗಿ ಕಟ್ಟಡಗಳನ್ನು ಒಡೆದು ಹಾಕಲು ನೋಟಿಸ್ ನೀಡಲಾಗಿದೆ. ಕಟ್ಟಡಗಳನ್ನು ಒಡೆದು ಹಾಕಲು ನೋಟೀಸ್ ನೀಡಿರುವುದರ ವಿರುದ್ಧವಾಗಿ ಈ ರೀತಿ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಯಾವುದೇ ಅಪಪ್ರಚಾರಗಳಿಗೆ ಬಗ್ಗುವ ಪ್ರಶ್ನೆಯೇ ಇಲ್ಲ. ನಿಯಮ ಉಲ್ಲಂಘಿಸಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮವಹಿಸಲಾಗುವುದು. ಅಲ್ಲದೇ, ಹತ್ತಾರು ವರ್ಷಗಳಿಂದ ಬಾಡಿಗೆಯನ್ನೇ ನೀಡದೇ, ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತಂದು ಅಲ್ಲೇ ಮುಂದುವರೆದಿರುವ ಕೆಲವು ಖಾಸಗಿ ವಿಮಾನಯಾನ ಸಂಸ್ಥೆಗಳು ಕೂಡ ಇದರಲ್ಲಿ ಭಾಗಿಯಾಗಿವೆ. ಈ ಎಲ್ಲಾ ಕುತಂತ್ರಗಳಿಗೆ ಬಲಿಯಾಗುವುದಿಲ್ಲ ಎಂದರು.
ಜಕ್ಕೂರು ವೈಮಾನಿಕ ತರಬೇತಿ ಶಾಲೆಯನ್ನು ಹಂತಹಂತವಾಗಿ ಅಭಿವೃದ್ಧಿಗೊಳಿಸುವ ಸಲುವಾಗಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಖಾಸಗಿಯವರಿಗೆ ನೀಡುವ ಯಾವುದೇ ಪ್ರಶ್ನೆ ಇಲ್ಲ ಎಂದು ವಿಧಾನಸಭೆಯ ಕಲಾಪದಲ್ಲಿಯೇ ಭರವಸೆ ನೀಡಿದ್ದೇನೆ, ನಾನು ಮತ್ತೊಮ್ಮೆ ಅದನ್ನು ಪುನರುಚ್ಚರಿಸುತ್ತಿದ್ದೇನೆ ಎಂದು ಸಚಿವರು ತಿಳಿಸಿದರು.
ವೈಮಾನಿಕ ಚಟುವಟಿಕೆಗಳಿಗೆ ಸೀಮಿತವಾಗಿ ಹಂತಹಂತವಾಗಿ ಅಭಿವೃದ್ಧಿಪಡಿಸಲು ಪ್ರಸ್ತಾವನೆ ಮಾತ್ರ ಸರ್ಕಾರದ ಮುಂದೆ ಇದೆ. ಅದರಲ್ಲಿ ಸಿಮ್ಯುಲೇಟರ್ ತರಬೇತಿ ಮಹತ್ವದಾಗಿದೆ. ಅದನ್ನು ಅಳವಡಿಸುವುದರಿಂದ ಖಾಸಗಿಯವರ ಪಾಲಾಗುತ್ತಿರುವ ಆದಾಯವನ್ನು ಸರ್ಕಾರಕ್ಕೆ ತಂದುಕೊಡುವ ಉದ್ದೇಶ ಹೊಂದಲಾಗಿದೆ. ಇದೆಲ್ಲದರ ನಡುವೆಯೂ ಈ ಪ್ರಸ್ತಾವನೆಯನ್ನು ಸಾರ್ವಜನಿಕರ ಮುಂದೆ ತೆರೆದಿಡಲಾಗುವುದು. ಸಾರ್ವಜನಿಕರ ಅಭಿಪ್ರಾಯಗಳ ಪರಿಗಣಿಸಿ ಮುಂದುವರೆಯಲಾಗುವುದು. ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ನೀಡುವ ಪ್ರಸ್ತಾಪ ಸರ್ಕಾರದ ಮುಂದೆ ಇರುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ ಎಂದರು.
ಕ್ಯಾಡ್ ಸಂಸ್ಥೆಯನ್ನು ಹಿಂದಿನ ಸರ್ಕಾರದ ಅವಧಿಯಲ್ಲಿ ರಚಿಸಿ ರಾಜೀವ್ ಗಾಂಧಿ ಏರೋ ಸ್ಪೋರ್ಟ್ಸ್ ಸೊಸೈಟಿ ಹೆಸರಿನಲ್ಲಿ 25 ಎಕರೆ ಜಾಗ ನೀಡಲು ಹಿಂದಿನ ಸರ್ಕಾರದ ಅವಧಿಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿ ಆದೇಶ ಹೊರಡಿಸಲಾಗಿತ್ತು. ಅದನ್ನು ನಾನು ರದ್ದುಪಡಿಸಿರುತ್ತೇನೆ.
ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ 50 ಎಕರೆ ಮೀಸಲು ಎಂದು ಸುದ್ದಿಯಾಗುತ್ತಿರುವ ವಿಚಾರ ಆಧಾರ ರಹಿತ ಸತ್ಯಕ್ಕೆ ದೂರವಾದ ವಿಷಯವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.