ಕೊಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಮೊಬೈಲ್ ಗೇಮಿಂಗ್ ಕಂಪನಿಯ ಅಪರೇಟರ್ ಮನೆ ಮೇಲೆ ನಡೆದ ದಾಳಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಶನಿವಾರ 17 ಕೋಟಿ ರೂ.ಗೂ ಹೆಚ್ಚು ನಗದನ್ನು ವಶಪಡಿಸಿಕೊಂಡಿದೆ.
ಮೊಬೈಲ್ ಗೇಮಿಂಗ್ ಅಪ್ಲಿಕೇಶನ್ ಇ-ನಗೆಟ್ಸ್ ಅಪರೇಟರ್ ಅಮೀರ್ ಖಾನ್ ಎಂಬಾತನ ಮನೆ ಸೇರಿದಂತೆ ಆತನಿಗೆ ಸಂಬಂಧಪಟ್ಟ ಆರು ಕಡೆ ದಾಳಿ ನಡೆಸಿರುವುದಾಗಿ ಇಡಿ ಶನಿವಾರ ಹೇಳಿದೆ. ಇ.ಡಿ ಬಿಡುಗಡೆ ಮಾಡಿದ ಛಾಯಾಚಿತ್ರದಲ್ಲಿ 500 ರೂ.ಗಳ ನೋಟುಗಳ ಮೂಟೆಗಳು ಮತ್ತು 2,000 ಮತ್ತು 200 ರೂ.ಗಳ ನೋಟುಗಳ ಬಂಡಲ್ ಗಳನ್ನು ಹಾಸಿಗೆಯ ಮೇಲೆ ಜೋಡಿಸಲಾಗಿತ್ತು.
ಪ್ರಸ್ತುತ ಇಡಿ ತನಿಖೆ ನಡೆಸುತ್ತಿರುವ ಮನಿ ಲಾಂಡರಿಂಗ್ ಪ್ರಕರಣವು 2021 ರ ಫೆಬ್ರವರಿಯಲ್ಲಿ ಕಂಪನಿ ಮತ್ತು ಅದರ ಅಪರೇಟರ್ಸ್ ವಿರುದ್ಧ ಕೋಲ್ಕತಾ ಪೊಲೀಸರು ದಾಖಲಿಸಿರುವ ಎಫ್ಐಆರ್ನಿಂದ ಬಂದಿದೆ. ಕೋಲ್ಕತಾದ ನ್ಯಾಯಾಲಯಕ್ಕೆ ಫೆಡರಲ್ ಬ್ಯಾಂಕ್ ಅಧಿಕಾರಿಗಳು ಸಲ್ಲಿಸಿದ ದೂರಿನ ಆಧಾರದ ಮೇಲೆ ಪಾರ್ಕ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಈ ಎಫ್ಐಆರ್ ದಾಖಲಿಸಲಾಗಿದೆ ಎಂದು ಇಡಿ ತಿಳಿಸಿದೆ.
ಉದ್ಯಮಿ ನೇಸರ್ ಅಹ್ಮದ್ ಖಾನ್ ಅವರ ಪುತ್ರ ಖಾನ್ ಅವರು ಸಾರ್ವಜನಿಕರಿಗೆ ಮೋಸ ಮಾಡಲು ಮೊಬೈಲ್ ಗೇಮಿಂಗ್ ಅಪ್ಲಿಕೇಶನ್ ಇ-ನುಗೆಟ್ಸ್ ಅನ್ನು ಪ್ರಾರಂಭಿಸಿದ್ದಾರೆ ಎಂದು ಇಡಿ ಆರೋಪಿಸಿದೆ.