ಮಂಗಳೂರು : ಸರಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಅದರಲ್ಲೂ ಮಂಗಳೂರಿನಲ್ಲಿ ಸರಕಾರಿ ವ್ಯವಸ್ಥೆ ಬಗ್ಗೆಯೇ ಒಂದು ಪೂರ್ವಾಗ್ರಹ ಮನಸ್ಥಿತಿಯಿದೆ. ಇಂತಹ ಸನ್ನಿವೇಶದ ನಡುವೆ, ಜನರು ಸರಕಾರಿ ಆಸ್ಪತ್ರೆಗಳತ್ತ ಗಮನ ಹರಿಸಬಹುದಾದ ಮಾನವೀಯ ಘಟನೆಯೊಂದು ವರದಿಯಾಗಿದೆ. ಖಾಸಗಿ ಆಸ್ಪತ್ರೆಯ ವೈದ್ಯರು ಬದುಕಿ ಉಳಿಯುವ ಸಾಧ್ಯತೆಯೇ ಇಲ್ಲವೆಂದು ಕೈಚೆಲ್ಲಿದ್ದ, ವಿಶೇಷ ಚೇತನ ಮಗುವೊಂದನ್ನು ಸರಕಾರಿ ಆಸ್ಪತ್ರೆ ವೈದ್ಯರು ಚಿಕಿತ್ಸೆಯ ಮೂಲಕ ಬದುಕಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವೆನ್ಲಾಕ್ ಜಿಲ್ಲಾ ಕೋವಿಡ್ ಆಸ್ಪತ್ರೆಯ ವೈದ್ಯರು ಈ ವಿಶೇಷ ಚೇತನ ಮಗುವಿಗೆ ವಿಶೇಷ ಚಿಕಿತ್ಸೆ ನೀಡಿ ಗುಣಮುಖರಾಗಿಸಿದ್ದಾರೆ. ಇದರಿಂದ ಖುಷಿಗೊಂಡ ಮಗುವಿನ ಕುಟುಂಬಸ್ಥರು, ಪೋಷಕರು ಆಸ್ಪತ್ರೆಯಲ್ಲಿ ಕೇಕ್ ಕತ್ತರಿಸಿ ಸಂತಸ ಹಂಚಿಕೊಂಡಿದ್ದಾರೆ.
ನಗರದ ಕೃಷ್ಣಾಪುರದ ವಿಶೇಷ ಚೇತನ ಮಗುವೊಂದಕ್ಕೆ ಕೊರೋನ ಸೋಂಕು ಇರುವುದು ದೃಢಪಟ್ಟಿತ್ತು. ಜೊತೆಗೆ ನ್ಯೂಮೊನಿಯಾವೂ ಇದ್ದು ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು. ಮಗುವನ್ನು ತಕ್ಷಣ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಅಲ್ಲಿ ಖಾಸಗಿ ಆಸ್ಪತ್ರೆಯು ಒಂದೇ ದಿನಕ್ಕೆ ರೂ.1 ಲಕ್ಷ ಬಿಲ್ ಮಾಡಿ, ಮಗು ಬದುಕುಳಿಯುವ ಸಾಧ್ಯತೆಯಿಲ್ಲ ಎಂದು ಕೈಚೆಲ್ಲಿತ್ತು.
ಇದರಿಂದ ಆತಂಕಿತರಾದ ಕುಟುಂಬ ತಕ್ಷಣವೇ ಮಗುವನ್ನು ಅಲ್ಲಿಂದ ಡಿಸ್ ಚಾರ್ಜ್ ಮಾಡಿಸಿ, ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಬಾಸಿತ್ ಅಲಿ ನೇತೃತ್ವದ ವೈದ್ಯರ ತಂಡ ಮಗುವಿಗೆ ಚಿಕಿತ್ಸೆ ನೀಡಲು ತಯಾರಾಯಿತು. ಎಲ್ಲಾ ಸವಾಲುಗಳನ್ನು ಎದುರಿಸಲು ಮುಂದಾದ ವೈದ್ಯರ ತಂಡ, ಮಗುವಿನ ಚಿಕಿತ್ಸೆ ಆರಂಭಿಸಿತ್ತು. ತಂಡದ ಅನನ್ಯ ಮಾನವೀಯ ಸೇವೆಯಿಂದ ಮಗು ಇದ್ದಕ್ಕಿದ್ದಂತೆ ಚೇತರಿಸಿಕೊಂಡಿತು. 15 ದಿನಗಳ ಚಿಕಿತ್ಸೆಯ ಬಳಿಕ, ನಿನ್ನೆ ಮಗು ಆಸ್ಪತ್ರೆಯಿಂದ ಬಿಡುಗಡೆಯಾಗಿದೆ.
ಇಂತಹ ಸಂಕಷ್ಟದ ಸಂದರ್ಭದಲ್ಲಿ ಮಗು ಕೊರೋನದಿಂದ ಗುಣಮುಖವಾಗಿದ್ದು, ಕುಟುಂಬಸ್ಥರು ಮತ್ತು ಪೋಷಕರಿಗೆ ತುಂಬಾ ಖುಷಿಯನ್ನುಂಟು ಮಾಡಿತು. ಹೀಗಾಗಿ ಅವರು ಮಗುವಿನ ಆರೈಕೆ ಮಾಡಿದ ವೈದ್ಯರು ಮತ್ತು ಸಿಬ್ಬಂದಿಯ ಜೊತೆ ಈ ಖುಷಿ ಹಂಚಿಕೊಳ್ಳಲು ಬಯಸಿದರು. ಅದಕ್ಕಾಗಿ ಅವರು ಕೇಕ್ ಕತ್ತರಿಸಿ ಸಂಭ್ರಮಿಸಿದರು. ವೈದ್ಯ ಡಾ. ಬಾಸಿತ್ ಅಲಿ ಕೇಕ್ ಕತ್ತರಿಸಿ ತಮ್ಮ ತಂಡದ ವೈದ್ಯರು ಮತ್ತು ಸಿಬ್ಬಂದಿಗೆ ಹಂಚಿದರು. ತಂಡದಲ್ಲಿ ವೈದ್ಯರಾದ ಪ್ರಸನ್ನ, ಪಾಯಲ್, ಅನುರಾಗ್ ಸೇರಿದಂತೆ ಶುಶ್ರೂಷಕರು, ದಾದಿಯರಿದ್ದರು.
ಬೇರೆ ಆಸ್ಪತ್ರೆಯಿಂದ ಕರೆದುಕೊಂಡು ಬಂದಿದ್ದ ಮಗುವಿಗೆ ನಾಲ್ಕೈದು ವೈದ್ಯರ ತಂಡ ಚಿಕಿತ್ಸೆ ಆರಂಭಿಸಿತ್ತು. ಕ್ರಮೇಣ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂತು. ಈಗ ಮಗು ಸಂಪೂರ್ಣ ಗುಣಮುಖವಾಗಿದೆ ಎಂದು ಡಾ. ಬಾಸಿತ್ ಅಲಿ ಈ ವೇಳೆ ತಿಳಿಸಿದರು.
ವೈದ್ಯರ ನಿಸ್ವಾರ್ಥ ಸೇವೆಗೆ ಧನ್ಯವಾದಗಳು. ಅವರ ಸೇವೆಯನ್ನು ಎಂದೂ ಗೌರವಿಸಬೇಕೆಂದು ಮಗುವಿನ ಪೋಷಕರು ಮಾತನಾಡುತ್ತಾ ವಿನಂತಿಸಿದರು. ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಉತ್ತಮವಾಗಿ ಸೇವೆ ಮಾಡುತ್ತಾರೆ. ಶುಚಿತ್ವವೂ ಇದೆ. ಜನರು ಯಾವುದೇ ಭಯ, ಆತಂಕಗಳಿಲ್ಲದೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಹೇಳಿದರು.