ಹೈದರಾಬಾದ್: ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್‌ಎಸ್) ಮುಖಂಡನನ್ನು ಅಪರಿಚಿತ ವ್ಯಕ್ತಿಗಳು ಹತ್ಯೆಗೈದ ಘಟನೆ ಖಮ್ಮಂ ಜಿಲ್ಲೆಯ ತೆಲದರುಪಲ್ಲಿ ಗ್ರಾಮದಲ್ಲಿ ನಡೆದಿದೆ.
ತಮ್ಮಿನೇನಿ ಕೃಷ್ಣಯ್ಯ ಹತ್ಯೆಗೊಳಗಾದ ವ್ಯಕ್ತಿ. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ತೆಲದರುಪಲ್ಲಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನಡೆಸಿ ಬೈಕ್‌ನಲ್ಲಿ ಹಿಂದಿರುಗುತ್ತಿದ್ದ ವೇಳೆ ಘಟನೆ ನಡೆದಿದೆ.
ಆಟೋರಿಕ್ಷಾದಲ್ಲಿ ಬಂದ ಅಪರಿಚಿತ ನಾಲ್ವರು ಕೃತ್ಯ ಎಸಗಿ ಪರಾರಿಯಾಗಿರುವ ಬಗ್ಗೆ ಮಾಹಿತಿ ದೊರಕಿದ್ದು, ಆರೋಪಿಗಳ ಪತ್ತೆಗೆ 4 ತಂಡಗಳನ್ನು ರಚಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿದೆ ಎಂದು ಖಮ್ಮಂ ಜಿಲ್ಲಾ ಸಹಾಯಕ ಪೊಲೀಸ್ ಕಮಿಷನರ್(ಎಸಿಪಿ) ತಿಳಿಸಿದ್ದಾರೆ.
ತಮ್ಮಿನೇನಿ ಕೃಷ್ಣಯ್ಯ ಅವರು ಕೆಲ ದಿನಗಳ ಹಿಂದೆ ಸಿಪಿಎಂ ತೊರೆದು ಟಿಆರ್‌ಎಸ್ ಪಕ್ಷ ಸೇರಿದ್ದರು.
ಪ್ರಸ್ತುತ ಘಟನೆಯಿಂದ ಉದ್ರಿಕ್ತರಾದ ಜನರು ಸಿಪಿಎಂ ನಾಯಕ ತಮ್ಮಿನೇನಿ ಕೋಟೇಶ್ವರ್ ರಾವ್ ಅವರ ನಿವಾಸದ ಮುಂದೆ ಜಮಾಯಿಸಿ ಕಲ್ಲು ತೂರಾಟ ನಡೆಸಿದ್ದು, ನಿವಾಸದ ಕೆಲವು ಭಾಗಗಳಿಗೆ ಹಾನಿಯಾಗಿದೆ. ಉದ್ರಿಕ್ತ ಗುಂಪನ್ನು ಚದುರಿಸಿ, ಸಾಕ್ಷ್ಯಾಧಾರಗಳ ಮೇಲೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು,ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.