ಶಾಲಾ-ಕಾಲೇಜುಗಳ 8,101 ಕೊಠಡಿಗಳ ನಿರ್ಮಾಣ: ಕಾಲ ಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಚಿವರ ಸೂಚನೆ

Prasthutha|

ಬೆಂಗಳೂರು: ‘ವಿವೇಕ’ ಯೋಜನೆಯಡಿ ರಾಜ್ಯದ 8,101 ಸರ್ಕಾರಿ ಶಾಲಾ-ಕಾಲೇಜುಗಳ ಕೊಠಡಿಗಳ ನಿರ್ಮಾಣ ಸೇರಿದಂತೆ ವಿವಿಧ ವಿಚಾರಗಳ ಕುರಿತು ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ ನಾಗೇಶ್ ಬುಧವಾರ ಬೆಂಗಳೂರಿನ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಿಂದ ವಿಡಿಯೊ ಕಾನ್ಫ್‌ರೆನ್ಸ್ ನಡೆಸಿದರು.

- Advertisement -

‘ವಿದ್ಯಾರ್ಥಿಗಳ ಸಂಖ್ಯೆ ಉತ್ತಮವಾಗಿದ್ದು, ಕೊಠಡಿಗಳು, ದುರಸ್ತಿ ಅಗತ್ಯತೆಯನ್ನು ನೋಡಿಕೊಂಡು ಆದ್ಯತೆ ಮೇರೆಗೆ ನೂತನ ಕೊಠಡಿಗಳು ನಿರ್ಮಾಣವಾಗಬೇಕು. ಕೊಠಡಿಗಳ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಕಾಮಗಾರಿ ವೇಳೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯ ಬಿದ್ದರೆ ಕಾಮಗಾರಿ ಮುಗಿಯುವವರೆಗೆ ವಿದ್ಯಾರ್ಥಿಗಳಿಗೆ ಪರ್ಯಾಯ ಕೊಠಡಿಗಳನ್ನು ವ್ಯವಸ್ಥೆ ಮಾಡಿಕೊಂಡು ತರಗತಿಗಳನ್ನು ನಡೆಸಬೇಕು. ಕಾಲಮಿತಿಯಲ್ಲಿ ಕೊಠಡಿಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು’ ಎಂದು ಸಚಿವರು ನಿರ್ದೇಶನ ನೀಡಿದರು.

‘ರಾಜ್ಯದ ಸರ್ಕಾರಿ, ಶಾಲಾ ಕಾಲೇಜುಗಳ ಆಸ್ತಿ ಸಂರಕ್ಷಣೆಗೆ ಇದೇ ಆಗಸ್ಟ್‌ನಿಂದ ಅಕ್ಟೋಬರ್‌ ವರೆಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಆಸ್ತಿ ದಾಖಲೆಗಳು ಸೂಕ್ತವಾಗಿವೆಯೇ? ಈ ಹಿಂದೆ ಶಿಕ್ಷಣ ಸಂಸ್ಥೆಗಳಿಗಾಗಿ ದಾನ ರೂಪದಲ್ಲಿ ನೀಡಿರುವ ಆಸ್ತಿಗಳು ನೋಂದಣಿಯಾಗಿವೆಯೇ? ಒತ್ತುವರಿ ತೆರವು ಮಾಡಲು ಕೈಗೊಂಡಿರುವ ಕ್ರಮಗಳ ಕುರಿತು ಕಂದಾಯ ಇಲಾಖೆಯ ಜೊತೆಗೆ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕು’ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

- Advertisement -

‘ಶಾಲೆ-ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಅನುಷ್ಠಾನ ಮಾಡಲಾಗುತ್ತಿರುವ ‘ಶಾಲಾ ಶೈಕ್ಷಣಿಕ ದತ್ತು ಕಾರ್ಯಕ್ರಮ’ದಲ್ಲಿ ಎಲ್ಲ ಅಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಬೇಕು. ಅಧಿಕಾರಿಗಳು ತಮ್ಮ ವ್ಯಾಪ್ತಿಯ ಯಾವುದಾದರೂ ಒಂದು ಶಾಲೆ ಅಥವಾ ಪಿಯು ಕಾಲೇಜನ್ನು ಶೈಕ್ಷಣಿಕ ಅಭಿವೃದ್ಧಿ ವಿಚಾರಕ್ಕೆ ದತ್ತು ಪಡೆಯಬೇಕು. ತಿಂಗಳಿಗೆ ಕನಿಷ್ಠ ಒಮ್ಮೆ ಭೇಟಿ ನೀಡಬೇಕು. ಶಿಕ್ಷಕರು, ಉಪನ್ಯಾಸಕರಿಗೆ ಸಲಹೆ ಸೂಚನೆಗಳನ್ನು ನೀಡಬಹುದು. ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ಸಲಹೆ, ಸೂಚನೆಗಳನ್ನು ಪಡೆಯಬೇಕು. ಶಿಕ್ಷಣ ಗುಣಮಟ್ಟ ಸುಧಾರಣೆ ಮತ್ತು ಪರೀಕ್ಷೆ ಫಲಿತಾಂಶ ಸುಧಾರಣೆಗೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಕುರಿತು ಯೋಜನೆ ರೂಪಿಸಬೇಕು’ ಎಂದು ಸಚಿವರು ಅಧಿಕಾರಿಗಳಿಗೆ ಸಲಹೆ ನೀಡಿದರು.

‘ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಕೇಂದ್ರ ಸರ್ಕಾರದಿಂದ ‘ಮನೆ ಮನೆಯಲ್ಲಿ ಧ್ವಜಾರೋಹಣ’ (ಹರ್ ಘರ್ ತಿರಂಗಾ) ಅಭಿಯಾನಕ್ಕೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಲ್ಲಿ ಹಾಗೂ ಮನೆ ಮನೆಗಳಲ್ಲಿ ರಾಷ್ಟ್ರ ಧ್ವಜ ಹಾರಿಸಲು ಎಲ್ಲರಿಗೂ ಸಲಹೆ, ಸೂಚನೆ, ಪ್ರೇರಣೆ ನೀಡಬೇಕು’ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅರ್ಥಪೂರ್ಣ ಆಚರಣೆಗಾಗಿ ಶಾಲೆ-ಕಾಲೇಜುಗಳಲ್ಲಿ ಪ್ರಬಂಧ, ಗೀತ ಗಾಯನ, ವೇಷ ಭೂಷಣ, ಭಾಷಣ, ರಾಷ್ಟ್ರಧ್ವಜ ಚಿತ್ರ ಬಿಡಿಸುವ ಸ್ಪರ್ಧೆಗಳನ್ನು ಆಯೋಜಿಸಬೇಕು ಎಂದು ಶಿಕ್ಷಣ ಇಲಾಖೆಯಿಂದಲೂ ಸುತ್ತೋಲೆ ಹೊರಡಿಸಲಾಗಿದ್ದು, ಅನುಷ್ಠಾನಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.

ಸಭೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಡಾ.ಎಸ್. ಸೆಲ್ವಕುಮಾರ್, ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾದ ಆರ್. ವಿಶಾಲ್, ರಾಜ್ಯ ಯೋಜನಾ ನಿರ್ದೇಶಕರಾದ ಬಿ.ಬಿ. ಕಾವೇರಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತರಾದ ಗರಿಮಾ ಪಂವಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.



Join Whatsapp