ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಇಂದು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದರು.
ಇತ್ತೀಚೆಗೆ ಹತ್ಯೆಗೊಳಗಾದ ಬಿಜೆಪಿ ಯುವಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಅವರ ಪ್ರಕರಣದ ತನಿಖೆಯನ್ನು ಎನ್.ಐ.ಎಗೆ ಒಪ್ಪಿಸಿರುವುದಕ್ಕೆ ಅವರು ಧನ್ಯವಾದ ಸಮರ್ಪಿಸಿದರು. ಅಲ್ಲದೆ, ಈ ಪ್ರಕರಣದ ತನಿಖೆಯಲ್ಲಿ ವಿಶೇಷ ಕಾಳಜಿ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವಂತೆ ನಳಿನ್ ಕುಮಾರ್ ಕಟೀಲ್ ವಿನಂತಿಸಿದರು.
ಈ ಸಂದರ್ಭದಲ್ಲಿ ಗೃಹ ಸಚಿವರು ರಾಜ್ಯದಲ್ಲಿ ಎನ್.ಐ.ಎಗೆ ವಹಿಸಿರುವ ಪ್ರಕರಣಗಳ ತನಿಖೆಯನ್ನು ಶೀಘ್ರವಾಗಿ ಕೈಗೊಂಡು ಅಪರಾಧ ಕೃತ್ಯ ಎಸಗುವವರಿಗೆ ಕಠಿಣ ಕ್ರಮಗಳನ್ನು ನೀಡಲಾಗುವುದು ಮತ್ತು ಎನ್.ಐ.ಎ ಅಧಿಕಾರಿಗಳಿಗೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚಿಸುವುದಾಗಿ ಭರವಸೆ ನೀಡಿದ್ದಾರೆ.