ಭೂಕಂಪದ ಮಧ್ಯೆಯೇ ನಂದಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ; ರಾಜ್ಯ ಸರ್ಕಾರದ ವಿರುದ್ಧ ಸ್ಥಳೀಯರ ಆಕ್ರೋಶ

Prasthutha|

ಬೆಂಗಳೂರು: ಭೂಕಂಪನ ಅನುಭವವಾಗಿರುವ ಮಧ್ಯೆಯೇ ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ಮೊದಲ ರೋಪ್‌ವೇ ಯೋಜನೆಯನ್ನು ಕಾರ್ಯಗತಗೊಳಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.

- Advertisement -

ಕಳೆದ ವರ್ಷ ಚಿಕ್ಕಬಳ್ಳಾಪುರದಲ್ಲಿ ಲಘು ಭೂಕಂಪಗಳು ಸಂಭವಿಸಿದ್ದು, ಅತಿವೃಷ್ಟಿಯಿಂದಾಗಿ ನಂದಿಬೆಟ್ಟ ಮತ್ತು ದೇವರಾಯದುರ್ಗದಲ್ಲಿ ಭೂಕುಸಿತ ಸಂಭವಿಸಿದೆ. ಇದರ ಪರಿಣಾಮವಾಗಿ  ಬಂಡೆಗಳೂ ಕುಸಿದಿದ್ದವು. ಕಳೆದ ಮೇ ತಿಂಗಳಲ್ಲಿ ರಿಕ್ಟರ್ ಮಾಪಕದಲ್ಲಿ 2.6  ಮತ್ತು 2.4 ಅಳತೆಯ ಭೂಕಂಪಗಳು ವರದಿಯಾಗಿವೆ.

 ಬೆಂಗಳೂರಿನಿಂದ 61 ಕಿಲೋ ಮೀಟರ್ ದೂರದಲ್ಲಿರುವ ನಂದಿ ಗಿರಿಧಾಮದಲ್ಲಿ ರೋಪ್‌ವೇ ಯೋಜನೆಗೆ ಕಂಪೆನಿಗಳು ಆಸಕ್ತಿ ತೋರಿರುವುದರಿಂದ ಪ್ರವಾಸೋದ್ಯಮ ಇಲಾಖೆ ಇದೀಗ ಟೆಂಡರ್ ಕರೆಯಲು ಮುಂದಾಗಿದ್ದು, ಎರಡು/ಮೂರು ತಿಂಗಳೊಳಗೆ ಕೆಲಸ ಪ್ರಾರಂಭವಾಗಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಆದರೆ ಈ ಪ್ರದೇಶದಲ್ಲಿ ಭೂಮಿ ಕಂಪಿಸುವ ಘಟನೆಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಯೋಜನೆಯನ್ನು ಸ್ಥಗಿತಗೊಳಿಸಬೇಕು ಎಂದು ಅರಣ್ಯಾಧಿಕಾರಿಗಳು ಮತ್ತು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

 ಚಿಕ್ಕಬಳ್ಳಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಹಿಂದೆ ಹಲವು ಬಾರಿ  ಕಂಪನಗಳು ಸಂಭವಿಸಿದ್ದು, ಆದ್ದರಿಂದ ಮರಗಳನ್ನು ಕತ್ತರಿಸುವುದು, ದುರ್ಬಲ ಭೂಮಿಯನ್ನು ಕೊರೆಯುವುದರಿಂದ ಮುಂದಿನ ದಿನಗಳಲ್ಲಿ ಅಪಾಯವುಂಟಾಗುವ ಸಾಧ್ಯತೆಯಿದೆ. ರೋಪ್ ವೇ ಕೆಲಸಕ್ಕೆ ಮುಂದಾಗುವ ಮುನ್ನ ತಜ್ಞರಿಂದ ಪರಿಸರ ಮತ್ತು ಭೂಮಿಯ ಅಧ್ಯಯನ ಮಾಡಿಸುವುದು ಅತ್ಯಗತ್ಯ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣಕ್ಕೆ ಯೋಜನೆ ಹಾಕಲಾಗಿತ್ತು. ಆದರೆ ಸ್ಥಳೀಯರು ಮತ್ತು ಪರಿಸರವಾದಿಗಳ ತೀವ್ರ ವಿರೋಧದಿಂದಾಗಿ ಆ ಯೋಜನೆಯನ್ನು ಕೈಬಿಡಲಾಗಿದೆ.



Join Whatsapp