ಹತ್ಯೆಯಾದ ಫಾಝಿಲ್ ಬದುಕು ಕರಾವಳಿಗರ ಕಣ್ಣು ತೆರೆಸಬೇಕಿತ್ತು….

Prasthutha|

ಫಾಝಿಲ್ ಯಾವ ಸಂಘಟನೆಗೂ ಸೇರಿದವನಲ್ಲ. ಫಾಝಿಲ್ ಈವರೆಗೂ ಯಾವ ಕೋಮುಗಲಭೆಗಳಲ್ಲೂ, ಗದ್ದಲದಲ್ಲೂ ಭಾಗಿಯಾದವಲ್ಲ. ಫಾಝಿಲ್ ಬದುಕು ಕರಾವಳಿಗರ ಕಣ್ಣು ತೆರೆಸಬೇಕಿತ್ತು. ಫಾಝಿಲ್ ಬದುಕು ಕೇವಲ ಫಾಝಿಲನದ್ದು ಮಾತ್ರವಲ್ಲ. ಇಡೀ ಕರಾವಳಿ ಈ ಬಗ್ಗೆ ಯೋಚಿಸಬೇಕಿತ್ತು.‌ ದುರಾದೃಷ್ಟವಶಾತ್ ಕರಾವಳಿಗರು ಕೋಮುಗಲಭೆಗಳಲ್ಲಿ ಮುಳುಗಿದ್ದಾರೆ.

- Advertisement -

ಮಂಗಳೂರಿನಲ್ಲಿ ದೇಶದ ಬಹುದೊಡ್ಡ ಪೆಟ್ರೋಲಿಯಂ ರಿಫೈನರಿಯಿದೆ. ಮಂಗಳೂರು ವಿಶೇಷ ಆರ್ಥಿಕ ವಲಯವೂ ಇದೆ. ಇಲ್ಲಿ ಪೆಟ್ರೋಲ್, ಡಿಸೇಲ್, ಗ್ಯಾಸ್, ಡಾಂಬರು ತುಂಬಿಸಿಕೊಂಡು ಸರಬರಾಜು ಮಾಡಲು ದೇಶದಾದ್ಯಂತ ಟ್ಯಾಂಕರ್ ಗಳು ಬರುತ್ತದೆ. ಹೆದ್ದಾರಿಯಿಂದ ಸುರತ್ಕಲ್ ಮಾರ್ಗವಾಗಿ ಎಂಆರ್ ಪಿಎಲ್ ಒಳಗೆ ಟ್ಯಾಂಕರ್ ಗಳು ಪ್ರವೇಶಿಸುತ್ತದೆ. ಈ ಟ್ಯಾಂಕರ್ ಉದ್ಯಮದ್ದೇ ಒಂದು ಮಾಫಿಯಾ. ಟ್ಯಾಂಕರ್ ನಲ್ಲಿ ಡ್ರೈವರ್ ಜೊತೆ ಕ್ಲೀನರ್ ಕೂಡಾ ಇರಬೇಕು. ಸಂಬಳ ಉಳಿಸಲು ಟ್ಯಾಂಕರ್ ನಲ್ಲಿ ಡ್ರೈವರ್ ಮಾತ್ರ ಬರುತ್ತಾರೆ. ಎಂಅರ್ ಪಿಎಲ್ ಒಳ ಹೋಗಬೇಕಾದರೆ ಕ್ಲೀನರ್ ಇರಲೇಬೇಕು ಎಂಬುದು ನಿಯಮ.

ಹಾಗಾಗಿ ಟ್ಯಾಂಕರ್ ಡ್ರೈವರ್ ಗಳು ಎಂಅರ್ ಪಿಎಲ್ ಗೇಟ್ ಬಳಿ ರಸ್ತೆ ಬದಿಯಲ್ಲಿ ಪಾರ್ಕಿಂಗ್ ಮಾಡಿ ಕ್ಲೀನರ್ ಗಳಿಗಾಗಿ ಕಾಯುತ್ತಾರೆ. ಮಂಗಳೂರಿನ ಹುಡುಗರು ಕ್ಲೀನರ್ ಆಗಿ ಎಂಅರ್ ಪಿಎಲ್ ಒಳಹೋಗಲು ಕಾಯುತ್ತಿರುತ್ತಾರೆ. ಹೀಗೆ ಕಾಯುತ್ತಿದ್ದ ಹುಡುಗರನ್ನು ಟ್ಯಾಂಕರ್ ಹತ್ತಿಸಿ ಎಂಆರ್ ಪಿಎಲ್ ಒಳಗೆ ಕರೆದೊಯ್ಯಲಾಗುತ್ತದೆ. ಗ್ಯಾಸ್, ಪೆಟ್ರೋಲ್, ಡಾಮಾರು ತುಂಬಿಸಲು ಸಹಾಯ ಮಾಡುವುದು ಕ್ಲೀನರ್ ಕೆಲಸ. ಹಾಗೆ ತುಂಬಿದ ಟ್ಯಾಂಕರ್ ಹೊರ ಬಂದ ಮೇಲೆ ಗೇಟ್ ನಲ್ಲಿ ಕ್ಲೀನರ್ ಇಳಿಯಬೇಕು. ಇದು ಮಂಗಳೂರಿಗೆ ಬಂದ ಬೃಹತ್ ಕೈಗಾರಿಕೆಗಳು ಮಂಗಳೂರಿಗರಿಗೆ ಕೊಟ್ಟ ಉದ್ಯೋಗ.

- Advertisement -

ನೋಡೋಕೆ ಸಿನೇಮಾ ಹೀರೋ ತರಹ ಕಾಣುವ ಫಾಝಿಲ್ ಇದೇ ಕೆಲಸ ಮಾಡುತ್ತಿದ್ದ. ಮಂಗಳಪೇಟೆಯ ಬಡ ಕುಟುಂಬದಲ್ಲಿ ಹುಟ್ಟಿರುವ ಫಾಝಿಲ್ ಎಂಅರ್ ಪಿಎಲ್ ಗೆ ಬರೋ ಟ್ಯಾಂಕರ್ ಗಾಗಿ ಕಾಯುತ್ತಾನೆ. ಮಂಗಳಪೇಟೆಯೆಂದರೆ ಎಂಆರ್ ಪಿಎಲ್ ನ ಕಂಪೌಂಡಿಗೆ ತಾಗಿಕೊಂಡಿರುವ ಗ್ರಾಮ. ಪಿಎಲ್ ನ ಎತ್ತರದ ಚಿಮಿಣಿಯ ನೆರಳೂ, ಚಿಮಣಿಯ ಬೆಂಕಿಯ ಬೆಳಕೂ ಮಂಗಳಪೇಟೆಗೆ ಬೀಳುತ್ತದೆ. ಅಂತಹ ಮಂಗಳಪೇಟೆಯ ಹುಡುಗ ಫಾಝಿಲ್ ಉದ್ಯೋಗಕ್ಕಾಗಿ ದಿನಾ ಎಂಆರ್ ಪಿಎಲ್ ಗೇಟ್ ಎದುರು ಟ್ಯಾಂಕರ್ ಗಾಗಿ ಕಾಯಬೇಕು.

ಮಂಗಳೂರಿನ ಕೋಮುದ್ವೇಷಕ್ಕೆ ಮುಸ್ಲೀಮ್ ಹುಡುಗರ ಫ್ಯಾಶನ್ ಕೂಡಾ ಕಾರಣ. ಈ ರೀತಿ ಬ್ಯಾರಿ ಮುಸ್ಲಿಂ ಹುಡುಗರು ಸಿನೇಮಾ ಹೀರೋಗಳಂತೆ ಕಾಣಲು ಅವರ ಕಠಿಣ ಪರಿಶ್ರಮ ಕಾರಣ. ಬೆಳಿಗ್ಗೆದ್ದು ಮೀನು ಮಾರಾಟ, ಗುಜರಿ, ಕ್ಲೀನರ್ ಕೆಲಸ ಮಾಡುವ ಬ್ಯಾರಿ ಹುಡುಗರು ಬದುಕನ್ನು ಸಂಭ್ರಮಿಸುತ್ತಾರೆ. ಇದು ನಿರುದ್ಯೋಗಿಗಳ ಅಸೂಯೆಗೆ ಕಾರಣವಾಗಿ ಕೋಮುದ್ವೇಷ ಉಂಟಾಗುವುದೂ ಒಂದು ಕಾರಣ. ಈ ಆರ್ಥಿಕ, ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು, ಬ್ಯಾರಿಗಳಂತೆಯೇ ಆರ್ಥಿಕವಾಗಿ ಸದೃಡರಾಗಲು ಎಂಅರ್ ಪಿಎಲ್, ಎಸ್ ಇಝಡ್ ಗಳಲ್ಲಿ ಖಾಯಂ ಉದ್ಯೋಗಕ್ಕಾಗಿ ಹೋರಾಟ ಮಾಡಬೇಕಿತ್ತು. ಸುರತ್ಕಲ್ ನಲ್ಲಿ ಸಾವಿಗೀಡಾದ ಶ್ರಮಿಕ ಫಾಝಿಲ್ ಬದುಕನ್ನು ನಾವು ಹೀಗೆ ನೋಡಬೇಕಿದೆ.



Join Whatsapp