ಬೆಂಗಳೂರು : ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಎಂಬಾತನನ್ನು ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ನಡೆಸಿದ್ದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಂಡಿಸಿದ್ದಾರೆ. ಆದರೆ ವಾರದ ಹಿಂದೆ ಇದೇ ಪ್ರದೇಶದಲ್ಲಿ ನಡೆದ ಮುಸ್ಲಿಂ ಕಾರ್ಯಕರ್ತನ ಬಗ್ಗೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡದ ಸಿಎಂ ನಡೆಯ ಬಗ್ಗೆ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಕುರಿತು ಟ್ವೀಟ್ ಮಾಡಿರುವ ಸಿಎಂ ಬೊಮ್ಮಾಯಿ, ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ನಮ್ಮ ಪಕ್ಷದ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಬರ್ಬರ ಹತ್ಯೆ ಖಂಡನೀಯ. ಇಂಥ ಹೇಯಕೃತ್ಯ ಎಸಗಿರುವ ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸಿ ಕಾನೂನಿನ ಅಡಿಯಲ್ಲಿ ಶಿಕ್ಷಿಸಲಾಗುವುದು. ಪ್ರವೀಣ ಆತ್ಮಕ್ಕೆ ಶಾಂತಿ ಸಿಗಲಿ, ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ಕರುಣಿಸಲಿ. ಓಂ ಶಾಂತಿಃ’ ಎಂದು ತಿಳಿಸಿದ್ದಾರೆ.
ವಾರಗಳ ಹಿಂದೆಯಷ್ಟೇ ಇದೇ ಪ್ರದೇಶದಲ್ಲಿ ಮಸೂದ್ ಎಂಬ ಯುವಕನನ್ನು ಸಂಘ ಪರಿವಾರದ ಗೂಂಡಾಗಳು ಗುಂಪುಹತ್ಯೆ ನಡೆಸಿದ್ದು ಯಾವುದೇ ರಾಜಕೀಯ ಮುಖಂಡರಿಂದ ವಿರೋಧ ವ್ಯಕ್ತವಾಗಲಿಲ್ಲ. ಈ ಸಂಬಂಧ ಸಾಮಾಜಿಕ ವಲಯಗಳಲ್ಲಿ ಭಾರೀ ಚರ್ಚೆಯಾಗುತ್ತಿದ್ದು ಸತ್ತವನ ಧರ್ಮ ನೋಡಿ ಸಂತಾಪ ಸೂಚಿಸುವ ಸರಕಾರ ಎಂದು ಸಾರ್ವಜನಿಕರು ಲೇವಡಿ ಮಾಡಿದ್ದಾರೆ.