ಮಂಗಳೂರು ನೆಲ್ಲಿಕಾಯಿ ರಸ್ತೆ ಒನ್ ವೇ: ನಾಗರಿಕರಿಂದ ಪ್ರತಿಭಟನೆ

Prasthutha|

ಮಂಗಳೂರು: ನಗರದ ಹೃದಯ ಭಾಗವಾದ ಸ್ಟೇಟ್ ಬ್ಯಾಂಕ್ ನಿಂದ ಹಳೆ ಬಂದರಿಗೆ ಹೋಗುವ ನೆಲ್ಲಿಕಾಯಿ ರಸ್ತೆಯನ್ನು ಒನ್ ವೇ (ಏಕಮುಖ ರಸ್ತೆ)ಯಾಗಿ ಮಾಡಿರುವುದನ್ನು ವಿರೋಧಿಸಿ ಕಾರ್ಪೊರೇಟರ್ ಗಳಾದ ಅಬ್ದುಲ್ ಲತೀಫ್ ಕಂದಕ್ , ಸಂಶುದ್ದೀನ್ ಹೆಚ್.ಬಿ.ಟಿ, ಮುಹಮ್ಮದ್ ಕುಂಜತ್’ಬೈಲ್ ನೇತೃತ್ವದಲ್ಲಿ ನೂರಾರು ಸಾರ್ವಜನಿಕರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ.

- Advertisement -


ಸ್ಟೇಟ್ ಬ್ಯಾಂಕ್ ನಿಂದ ಹಳೆ ಬಂದರು, ಕುದ್ರೋಳಿ, ಬೆಂಗರೆ ಮತ್ತಿತರ ಕಡೆಗಳಿಗೆ ಸಂಪರ್ಕ ಕಲ್ಪಿಸುವ ನೆಲ್ಲಿಕಾಯಿ ರಸ್ತೆಯನ್ನು ಏಕ ಮುಖ ರಸ್ತೆಯನ್ನಾಗಿ ಮಾಡಿರುವುದು ಅವೈಜ್ಞಾನಿಕ. ಇದರಿಂದ ಈ ಭಾಗದ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಯಾರೊಂದಿಗೂ ಸಮಾಲೋಚನೆ ನಡೆಸದೆ ಏಕಾಏಕಿ ಈ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಅಬ್ದುಲ್ ಲತೀಫ್ ಕಂದಕ್ ಆಕ್ರೋಶ ವ್ಯಕ್ತಪಡಿಸಿದರು.


ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿ ಯಾರದೋ ಫೋನ್ ಕರೆಗೆ ಮಣಿದು ಈ ರಸ್ತೆಯನ್ನು ಒನ್ ವೇ ಮಾಡಲಾಗಿದೆ. ರಸ್ತೆ ಅಗಲೀಕರಣದಿಂದ ಜನರಿಗೆ ಅನುಕೂಲವಾಗಬೇಕೇ ಹೊರತು ತೊಂದರೆಯಾಗಬಾರದು. ರಸ್ತೆ ಅಗಲೀಕರಣ ಮಾಡಿ ಶ್ರೀಮಂತರ ಕಾರುಗಳನ್ನು ನಿಲ್ಲಿಸಲು ಅನುವು ಮಾಡಿಕೊಟ್ಟು ಬಡವರಿಗೆ ತೊಂದರೆ ಕೊಡುವುದು ನ್ಯಾಯವೇ ಎಂದು ಪ್ರಶ್ನಿಸಿದರು.

- Advertisement -


ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನವೊಲಿಸುವ ಪ್ರಯತ್ನ ನಡೆಸಿದರು. ಆದರೆ ನಿರ್ಧಾರವನ್ನು ಹಿಂಪಡೆಯದೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪ್ರತಿಭಟನಕಾರರು ತಿಳಿಸಿದರು.



Join Whatsapp