ನಿವೃತ್ತ ಸರ್ಕಾರಿ ನೌಕರರಿಗೆ ಆರೋಗ್ಯ ಯೋಜನೆ ವಿಸ್ತರಣೆ: ಮುಖ್ಯಮಂತ್ರಿ ಬೊಮ್ಮಾಯಿ

Prasthutha|

ಬೆಂಗಳೂರು: ನಿವೃತ್ತ ಸರ್ಕಾರಿ ನೌಕರರಿಗೆ ಆರೋಗ್ಯ ಯೋಜನೆಯ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

- Advertisement -

ಅವರು ಇಂದು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಸುವರ್ಣ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗನೆ ಈ ಬಗ್ಗೆ ಘೋಷಣೆ ಮಾಡಲಾಗುವುದು ಎಂದರು. ನಿವೃತ್ತ ನೌಕರರು ನಿರಂತರವಾಗಿ ಕ್ರಿಯಾಶೀಲರಾಗಿದ್ದು , ಉತ್ತಮ ಸಮಾಜ ನಿರ್ಮಾಣಕ್ಕೆ ಕಟಿಬದ್ಧರಾಗಿ ಕೆಲಸ ಮಾಡಬೇಕು.
ಮಾನವೀಯತೆ ಇರುವ ನೌಕರರಿದ್ದರೆ ಬಡವರ ಕಷ್ಟ ಕಾರ್ಪಣ್ಯ ದೂರ ಮಾಡಲು ಸಾಧ್ಯ. ಇದರ ತಳಹದಿಯ ಮೇಲೆ ಆಡಳಿತ ನಡೆಯಬೇಕು. ಮತ್ತೊಬ್ಬರ ಬಗ್ಗೆ ಪ್ರೀತಿ, ವಿಶ್ವಾಸ, ಅನುಕಂಪವಿದ್ದಾಗ ನ್ಯಾಯ ಕೊಡಲು ಸಾಧ್ಯ. 6 ಕೋಟಿಗಿಂತ ಹೆಚ್ಚು ಜನಸಂಖ್ಯೆ ನಮ್ಮ ಕೈಗೆ ಜವಾಬ್ದಾರಿ ಕೊಟ್ಟಿದೆ. 6 ಲಕ್ಷಕ್ಕೂ ಹೆಚ್ಚಿರುವ ಸರ್ಕಾರಿ ನೌಕರರು ಹಾಗೂ ಆಡಳಿತ ಮಾಡುವ ಜನಪ್ರತಿನಿಧಿಗಳ ಕೈಯಲ್ಲಿ ಜವಾಬ್ದಾರಿ ಇದೆ. ನಾವೆಲ್ಲ ಜನರ ವಿಶ್ವಾಸದ ಟ್ರಸ್ಟಿಗಳು. ನಮ್ಮ ಮೇಲಿರುವ ವಿಶ್ವಾಸಕ್ಕೆ ಅರ್ಹರಾಗಿ ನಾವು ನಡೆದುಕೊಳ್ಳಬೇಕು. ಆಗ ನಾವು ಈ ಸ್ಥಾನದಲ್ಲಿ ಕುಳಿತಿದ್ದಕ್ಕೆ ಸಾರ್ಥಕವಾಗುತ್ತದೆ. ಈ ಮನೋಭಾವ ಸರ್ಕಾರಿ ನೌಕರರಿಗೆ ಬಂದರೆ ಕರ್ನಾಟಕ ವಿಶ್ವದಲ್ಲಿಯೇ ನಂಬರ್ ಒನ್ ಆಗಲು ಸಾಧ್ಯ ಎಂದರು.

- Advertisement -

ಆಡಳಿತಕ್ಕೆ ಅನುಭವದ ಮಾರ್ಗದರ್ಶನ ಅಗತ್ಯ

ಆಡಳಿತ ನಡೆಸಲು ನಿವೃತ್ತ ನೌಕರರ ಅಗತ್ಯವಿದೆ. ತಿಳಿದುಕೊಳ್ಳುವ ಹಸಿವಿರುವವನು ಬೆಳೆಯುತ್ತಾನೆ. ಸರ್ಕಾರ ನಿವೃತ್ತ ನೌಕರರ ಸೇವೆಯನ್ನು ಆಗಾಗ್ಗೆ ಬಳಸಿಕೊಳ್ಳುತ್ತದೆ. ನಿವೃತ್ತರಾದೆವು ಎಂದು ನಿರಾಸೆಯಾಗಬೇಕಿಲ್ಲ. ಈ ಸರ್ಕಾರ ನಿಮ್ಮ ಬಗ್ಗೆ ಗೌರವ ಇಟ್ಟು ಕೊಂಡಿದೆ ಎಂದರು.

ನಿಮ್ಮ ಬೆಲೆ ನಮಗೆ ತಿಳಿದಿದೆ. ಇಷ್ಟು ದೊಡ್ಡ ಅನುಭವವುಳ್ಳ ಮಾನವ ಶಕ್ತಿ, ರಾಜ್ಯ ಕಟ್ಟಲು ಉಪಯೋಗವಾಗುತ್ತದೆ. ನಿವೃತ್ತಿ ಎನ್ನುವುದು ಸರ್ಕಾರದ ಕಾನೂನಿನ ಅನುಸಾರವಿದೆ. ವ್ಯಕ್ತಿಗೆ ನಿವೃತ್ತಿ ಎನ್ನುವುದು ಮನಸ್ಥಿತಿ. ಕೆಲವರು ನೌಕರಿಯಲ್ಲಿದ್ದೆ ನಿವೃತ್ತಿಯಾಗುತ್ತಾರೆ.ಮಾನಸಿಕವಾಗಿ ನಿವೃತ್ತ ರಾಗುತ್ತಾರೆ. ಇನ್ನು ಕೆಲವು ನಿವೃತ್ತ ನೌಕರರು ಇತರರಿಗೆ ಮಾರ್ಗದರ್ಶನ ಮಾಡುತ್ತಾರೆ. ಈಗಲೂ ಕ್ರಿಯಾಶೀಲರಾಗಿದ್ದಾರೆ. ಮಾನಸಿಕವಾಗಿ ನಿವೃತ್ತರಾಗದವರು ಜೀವನದಲ್ಲಿ ಎಂದೂ ನಿವೃತ್ತ ರಾಗುವುದಿಲ್ಲ. ಸಮಾಜದ ಅಭಿವೃದ್ಧಿಗೆ ನಿವೃತ್ತ ನೌಕರರು ಕೊಡುಗೆ ನೀಡಬಹುದು. ಮನಸ್ಸಿಗೆ ಸಂತೋಷ ಕೊಡುವ ಕೆಲಸ ಮಾಡಲು ಅವಕಾಶವಿದೆ. ರಾಜಕಾರಣಕ್ಕೆ ವಿದ್ಯಾರ್ಹತೆ ಹಾಗೂ ನಿವೃತ್ತಿ ಎರಡೂ ಇಲ್ಲ. ಹಾಗಾಗಿ ಕೆಲವು ನೌಕರರು ನಿವೃತ್ತಿಯ ನಂತರ ರಾಜಕಾರಣಕ್ಕೆ ಸೇರುತ್ತಾರೆ. ರಾಜಕಾರಣವನ್ನು ಪ್ರಾಮಾಣಿಕತೆಯಿಂದ, ಮಾನವೀಯತೆಯಿಂದ, ಒತ್ತಡದ ನಡುವೆಯೂ ಆತ್ಮಸಾಕ್ಷಿಗೆ ತಕ್ಕಂತೆ ಮಾಡಿದರೆ ಸಂತೋಷ ಹಾಗೂ ತೃಪ್ತಿ ಇರುತ್ತದೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.



Join Whatsapp