ಹಾರ್ದಿಕ್ ಪಾಂಡ್ಯ ಆಲ್ ರೌಂಡ್ ಆಟ ಆಟ: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Prasthutha|

ಲಂಡನ್: ಎಡ್ಜ್ಬಾಸ್ಟನ್ ಟೆಸ್ಟ್ ನಲ್ಲಿ ಎಡವಿದ್ದ ಟೀಮ್ ಇಂಡಿಯಾ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಪುಟಿದೆದ್ದಿದೆ. ಹಾರ್ದಿಕ್ ಪಾಂಡ್ಯ ಆಲ್ ರೌಂಡ್ ಆಟದ ನರವಿನಿಂದ, ಜಾಸ್ ಬಟ್ಲರ್ ಬಳಗವನ್ನು 50 ರನ್ ಗಳ ಅಂತರದಲ್ಲಿ ಭರ್ಜರಿಯಾಗಿಯೇ ಸದೆಬಡಿದ ಭಾರತ, ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

- Advertisement -

ರೋಸ್ ಬೌಲ್ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ರೋಹಿತ್ ಶರ್ಮಾ ಬಳಗ, 8 ವಿಕೆಟ್ ನಷ್ಟದಲ್ಲಿ 198 ರನ್ ಗಳಿಸಿತ್ತು. ಆದರೆ ಕಠಿಣ ಗುರಿ ಬೆನ್ನತ್ತಿದ ಆಂಗ್ಲ ಪಡೆ 148 ರನ್ ಗಳಿಸುವಷ್ಟರಲ್ಲೇ ಸರ್ವಪತನ ಕಂಡಿತು.

ಇಂಗ್ಲೆಂಡ್ ಬ್ಯಾಟಿಂಗ್ ನ ಪ್ರಮುಖ ಶಕ್ತಿಯಾಗಿದ್ದ ನಾಯಕ ಜಾಸ್ ಬಟ್ಲರ್ ಮತ್ತು ಬಿಗ್ ಹಿಟ್ಟರ್ ಲಿಯಾಮ್ ಲಿವಿಂಗ್ಸ್ ಟನ್ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿದ್ದು ಅತಿಥೇಯ ಪಾಲಿಗೆ ದುಬಾರಿಯಾಯಿತು. ಮಧ್ಯಮ ಕ್ರಮಾಂಕದಲ್ಲಿ ಮೊಯೀನ್ ಅಲಿ 36, ಹ್ಯಾರಿ ಬ್ರೂಕ್ 28, ಕ್ರಿಸ್ ಜೋರ್ಡನ್ 26* ಹಾಗೂ ಡಾವಿಡ್ ಮಲಾನ್ 21 ರನ್ ಗಳಿಸಿದರೂ ಗೆಲುವಿನ ಸನಿಹಕ್ಕೂ ತಲುಪಲು ಇಂಗ್ಲೆಂಡ್ ತಂಡಕ್ಕೆ ಸಾಧ್ಯವಾಗಲಿಲ್ಲ. ಜೇಸನ್ ರಾಯ್ ಮತ್ತು ಸ್ಯಾಮ್ ಕರನ್ ತಲಾ 4 ರನ್ ಗಳಿಸಲಷ್ಟೇ ಶಕ್ತರಾದರು.

- Advertisement -

ಹಾರ್ದಿಕ್ ಪಾಂಡ್ಯ ಆಲ್ ರೌಂಡರ್ ಆಟ: ಬ್ಯಾಟಿಂಗ್ ನಲ್ಲಿ ಬಿರುಸಿನ ಅರ್ಧಶತಕ ಸಿಡಿಸಿದ್ದ ಹಾರ್ದಿಕ್ ಪಾಂಡ್ಯ (51 ರನ್), ಬೌಲಿಂಗ್ ನಲ್ಲಿಯೂ ತಂಡಕ್ಕೆ ನೆರವಾದರು. ತನ್ನ ನಾಲ್ಕು ಓವರ್ ಗಳ ದಾಳಿಯಲ್ಲಿ 33 ರನ್ ನೀಡಿ 4 ಪ್ರಮುಖ ವಿಕೆಟ್ ಗಳನ್ನು ಪಡೆಯುವಲ್ಲಿ ಪಾಂಡ್ಯ ಯಶಸ್ವಿಯಾದರು. ಅಂತಿಮವಾಗಿ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡಿದ ದೀಪಕ್ ಹೂಡ ಕೇವಲ 17 ಎಸೆತಗಳನ್ನು ಎದುರಿಸಿ ಎರಡು ಸಿಕ್ಸರ್ ಮತ್ತು ಮೂರು ಬೌಂಡರಿಯೊಂದಿಗೆ 33 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ 39 ಮತ್ತು ನಾಯಕ ರೋಹಿತ್ ಶರ್ಮಾ 24 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಅರ್ಷದೀಪ್ ಸಿಂಗ್ ಮತ್ತು ಅನುಭವಿ ಸ್ಪಿನ್ನರ್ಯುಜುವೇಂದ್ರ ಚಹಲ್ ತಲಾ ಎರಡು ವಿಕೆಟ್ ಪಡೆದರು.



Join Whatsapp