ಬರ್ಲಿನ್: ಪತ್ರಕರ್ತರು ಏನು ಹೇಳುತ್ತಾರೆ ಮತ್ತು ಬರೆಯುತ್ತಾರೆ ಎಂಬುದಕ್ಕೆಲ್ಲ ಕಿರುಕುಳ ನೀಡುವುದು, ಜೈಲಿಗೆ ಹಾಕುವುದು ಸರಿಯಲ್ಲ ಎಂದು ಜರ್ಮನಿಯ ವಿದೇಶಾಂಗ ಸಚಿವಾಲಯವು ಆಲ್ಟ್ ನ್ಯೂಸ್ ನ ಸಹ ಸ್ಥಾಪಕ ಮುಹಮ್ಮದ್ ಝುಬೈರ್ ಅವರ ಬಂಧನದ ಸಂಬಂಧ ಟ್ವೀಟ್ ಹೇಳಿಕೆ ಹೊರಡಿಸಿದೆ.
ನಾವು ಇಯು-ಯೂರೋಪಿಯನ್ ಯೂನಿಯನ್ ಜೊತೆ ಸಂಪರ್ಕದಲ್ಲಿದ್ದೇವೆ. ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಇಯು ಮತ್ತು ಭಾರತದ ನಡುವೆ ಚರ್ಚೆಯು ಸಂಬಂಧದ ಒಂದು ಅಂಗವಾಗಿದೆ ಎಂದು ಜರ್ಮನ್ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ. ಇದಕ್ಕೆ ಭಾರತವು ಒಂದೇ ಮಾದರಿಯ ಅಭಿಪ್ರಾಯಗಳು ಉಪಯುಕ್ತವಲ್ಲ; ಅವನ್ನು ದೂರವಿಡಬೇಕು ಎಂದು ಮಾರುತ್ತರಿಸಿದೆ.
ಜರ್ಮನಿಯ ಹೇಳಿಕೆಗೆ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಪ್ರತಿಕ್ರಿಯಿಸಿ, “ ಈ ವಿಷಯದ ಪ್ರಕ್ರಿಯೆಯು ಈಗ ನ್ಯಾಯಾಲಯದಲ್ಲಿ ಇದೆ. ನ್ಯಾಯಾಲಯದಲ್ಲಿರುವ ಸಂಗತಿಯನ್ನು ಮಾತನಾಡುವುದು ನ್ಯಾಯಾಂಗ ನಿಂದನೆಯೋ ಏನೋ ನಾನರಿಯೆ. ಆದರೆ ಭಾರತದ ನ್ಯಾಯಾಂಗದ ಸ್ವಾತಂತ್ರ್ಯವು ಹಕ್ಕುಬದ್ಧವಾಗಿದೆ. ಎಲ್ಲ ಅಭಿಪ್ರಾಯವೂ ಒಂದೇ ಮಾದರಿ ಇರಲಾಗದು. ಅವನ್ನು ದೂರವಿಡಬೇಕು” ಎಂದು ಹೇಳಿದರು.
ಜರ್ಮನಿಯಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಝುಬೈರ್ ಬಗ್ಗೆ ಪ್ರಶ್ನಿಸಿದಾಗ ಅಲ್ಲಿನ ವಕ್ತಾರರು ಹೀಗೆ ಉತ್ತರಿಸಿದ್ದರು.
“ಮುಕ್ತವಾಗಿ ವರದಿ ಮಾಡುವುದು ಯಾವುದೇ ಸಮಾಜಕ್ಕೆ ಉಪಯುಕ್ತವಾದುದಾಗಿದೆ. ಪತ್ರಕರ್ತರು ಹೇಳುವುದಕ್ಕೆ ಬರೆಯುವುದಕ್ಕೆ ಟೀಕೆ ಮತ್ತು ಜೈಲಿಗೆ ಹಾಕುವುದು ಸರಿಯಲ್ಲ. ಈ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದ್ದು, ನವದೆಹಲಿಯ ನಮ್ಮ ರಾಯಭಾರಿ ಎಲ್ಲ ವಿಷಯವನ್ನು ಸಮಗ್ರವಾಗಿ ಗಮನಿಸುತ್ತಿದ್ದಾರೆ. ನಾವು ನಮ್ಮ ಯೂರೋಪಿಯನ್ ಯೂನಿಯನ್ ಪಾಲುದಾರರ ಜೊತೆ ಮಾತನಾಡುತ್ತೇವೆ. ಇಯು ಮತ್ತು ಭಾರತದ ನಡುವೆ ಮಾನವ ಹಕ್ಕುಗಳ ಒಪ್ಪಂದವಿದ್ದು ಅದರಲ್ಲಿ ಅಭಿಪ್ರಾಯ ಸ್ವಾತಂತ್ರ್ಯ, ಮಾಧ್ಯಮ ಸ್ವಾತಂತ್ರ್ಯ ಎಲ್ಲವೂ ಬರುತ್ತದೆ” ಎಂದು ಹೇಳಿದ್ದರು.