ಚೆನ್ನೈ: ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಯುವಕನೊಬ್ಬ ತೆಂಗಿನ ಚಿಪ್ಪಿನಲ್ಲಿ ಕಾಫಿ ಹಾಗೂ ಚಹಾವನ್ನು ಮಾರಾಟ ಮಾಡುತ್ತಿರುವ ಕೌತುಕ ದೃಶ್ಯ ಕಂಡು ಬಂದಿದೆ.
‘ತೆಂಗಿನ ಚಿಪ್ಪಿನ ಬಳಕೆ ಆರೋಗ್ಯಕರ’ ಎಂದು ನಂಬಿರುವ ದಿನಕರನ್ ಎಂಬ ಯುವಕ ಮರೀನಾ ಬೀಚ್ ಬಳಿ ಈ ವಿಶಿಷ್ಟ ಕಾರ್ಯ ಮಾಡುತ್ತಿದ್ದಾನೆ.
ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿರುವ ದಿನಕರನ್, ‘ವಿಭಿನ್ನವಾಗಿ ಏನನ್ನಾದರೂ ಮಾಡಬೇಕೆಂದು ಬಯಸಿದ್ದೆ. ಹೀಗಿರುವಾಗ ಚಹಾ ಮತ್ತು ಕಾಫಿ ಕುಡಿಯಲು ಗಾಜು ಮತ್ತು ಕಾಗದದ ಕಪ್ ಗಳಿಗಿಂತಲೂ ತೆಂಗಿನ ಚಿಪ್ಪು ಆರೋಗ್ಯಕರ ಎಂದು ತಿಳಿಯಿತು. ಆ ಬಳಿಕ ತೆಂಗಿನ ಚಿಪ್ಪಿನಲ್ಲಿ ಕಾಫಿ ಹಾಗೂ ಚಹಾವನ್ನು ನೀಡಲು ಆರಂಭಿಸಿದೆ’ ಎಂದು ತಿಳಿಸಿದ್ದಾನೆ.
ದಿನಕರನ್ ಪ್ರತಿದಿನ 60ರಿಂದ 70 ಚಿಪ್ಪುಗಳನ್ನು ಬಳಸುತ್ತಾರೆ. ಹಣದುಬ್ಬರ ಮತ್ತು ಹೆಚ್ಚುತ್ತಿರುವ ಖರ್ಚುಗಳ ನಡುವೆ, ಪ್ರತಿ ಸೋಮವಾರ ಕೇವಲ ಒಂದು ರೂಪಾಯಿಗೆ ಕಾಫಿ ಹಾಗೂ ಚಹಾವನ್ನು ನೀಡುತ್ತಿರುವ ದಿನಕರನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.