ಉಳ್ಳಾಲ ನಗರ ಸಭಾ ವ್ಯಾಪ್ತಿಯ ಕಾಮಗಾರಿಗಳನ್ನು ಶೀಘ್ರ ಕೈಗೆತ್ತಿಗೊಳ್ಳಲು ಆಗ್ರಹಿಸಿ ಯು.ಟಿ.ಖಾದರ್ ಭೇಟಿಯಾದ SDPI ನಿಯೋಗ

Prasthutha|

ಮಂಗಳೂರು: ಉಳ್ಳಾಲ ನಗರ ಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ, ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಿ ,ಅಗತ್ಯವಿರುವ ಕಾಮಗಾರಿಗಳನ್ನು ಶೀಘ್ರವಾಗಿ ಕೈಗೊಳ್ಳಬೇಕು ಎಂದು ಒತ್ತಾಯಿಸಿ SDPI ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ನೇತೃತ್ವದಲ್ಲಿ ಪಕ್ಷದ ನಗರಸಭಾ ಕೌನ್ಸಿಲರ್ ಗಳು ಮತ್ತು ಸ್ಥಳೀಯ ನಾಯಕರ ನಿಯೋಗವು ಮಂಗಳೂರಿನ ಮಲ್ಲಿಕಟ್ಟೆಯ ಪ್ರವಾಸಿ ಮಂದಿರದಲ್ಲಿ ಮಂಗಳೂರು ಶಾಸಕ ಯು. ಟಿ. ಖಾದರ್ ಅವರನ್ನು ಭೇಟಿಯಾಯಿತು.

- Advertisement -


ವೇಗವಾಗಿ ಬೆಳೆಯುತ್ತಿರುವ ಉಳ್ವಾಲ ನಗರವನ್ನು ಭವಿಷ್ಯದ ದಿನಗಳಲ್ಲಿ ಯಾವುದೇ ಮೂಲಭೂತ ಸಮಸ್ಯೆಗಳಿಗೆ ಅಡೆತಡೆಗಳು ಉಂಟಾಗದ ರೀತಿಯಲ್ಲಿ ಸಮಗ್ರವಾದ ಕಾರ್ಯಯೋಜನೆಗಳನ್ನು ಹಾಕಿಕೊಂಡು ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಯೋಜನೆಗಳನ್ನು ರೂಪಿಸಬೇಕು. ಸರಕಾರದಿಂದ ಬರುವ ಎಲ್ಲಾ ನಿಧಿಗಳನ್ನ ಸದ್ವಿನಿಯೋಗ ಮಾಡಬೇಕು. ಇತ್ತೀಚೆಗೆ ನಗರೋತ್ಥಾನ ನಿಧಿಯಲ್ಲಿ ಉಳ್ಳಾಲ ನಗರಸಭೆಗೆ ಬಿಡುಗಡೆಯಾದ ಮೂವತ್ತು ಕೋಟಿ ರೂಪಾಯಿಗಳ ಅನುದಾನವನ್ನು ಯಾವುದೇ ತಾರತಮ್ಯ ಮಾಡದೇ ಎಲ್ಲಾ ಕೌನ್ಸಿಲರ್ ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಉಳ್ಳಾಲ ನಗರದ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನದಿಂದ ಎಲ್ಲಾ ವಾರ್ಡ್ ಗಳಿಗೂ ಸಮಾನವಾಗಿ ಹಂಚಿಕೆ ಮಾಡಬೇಕು ಎಂದು ನಿಯೋಗವು ಶಾಸಕರಿಗೆ ಒತ್ತಾಯಿಸಿದೆ. ಇದಕ್ಕೆ ಸ್ಪಂದಿಸಿದ ಶಾಸಕರು ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ನಗರಸಭೆಯ ಆಯುಕ್ತರೊಂದಿಗೆ ಮಾತನಾಡಿ ಕಾರ್ಯರೂಪಕ್ಕೆ ತರುವುದಾಗಿ ನಿಯೋಗಕ್ಕೆ ಭರವಸೆ ನೀಡಿದರು.


ಶಾಸಕರನ್ನು ಭೇಟಿಯಾದ ನಿಯೋಗದಲ್ಲಿ SDPI ಪಕ್ಷದ ಕೌನ್ಸಿಲರ್ ಗಳು ಮತ್ತು ಪಕ್ಷದ ಮುಖಂಡರಾದ ಅಕ್ರಮ್ ಹಸನ್, ಸ್ಥಳೀಯ ನಾಯಕರಾದ ಅಬ್ಬಾಸ್ ಎ ಆರ್ , ಸುಹೈಲ್ ಉಳ್ವಾಲ, ರವೂಫ್ ಉಳ್ಳಾಲ ಹಾಗೂ ಇತರರು ಇದ್ದರು. ಈ ಸಂದರ್ಭದಲ್ಲಿ ಉಳ್ಳಾಲ ನಗರ ಸಭೆಯ ಅಧ್ಯಕ್ಷೆ ಚಿತ್ರಕಲಾ ಉಪಸ್ಥಿತರಿದ್ದರು.



Join Whatsapp