ಮೋದಿ ಸರ್ಕಾರ ಎಲ್ಲ ಮಿತಿಗಳನ್ನು ಮೀರಿದೆ: ರಣದೀಪ್ ಸುರ್ಜೇವಾಲ

Prasthutha|

ನವದೆಹಲಿ: ದೆಹಲಿಯಲ್ಲಿ ನಿನ್ನೆ ನಡೆದ ಕಾಂಗ್ರೆಸ್ ಪ್ರತಿಭಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರು ಪೊಲೀಸರ ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದಾರೆ. ಚಿದಂಬರಂ ಅವರ ಪಕ್ಕೆಲುಬಿನ ಭಾಗಕ್ಕೆ ಗಾಯಗಳಾಗಿವೆ.

- Advertisement -

ಪಕ್ಷದ ವಕ್ತಾರ ರಣದೀಪ್ ಸುರ್ಜೇವಾಲ ಮಾತನಾಡಿ, ಮೋದಿ ಸರ್ಕಾರ ಎಲ್ಲ ಮಿತಿಗಳನ್ನು ಮೀರಿದೆ. ಮಾಜಿ ಗೃಹ ಸಚಿವ ಪಿ.ಚಿದಂಬರಂ ಅವರನ್ನು ಪೊಲೀಸರು ಥಳಿಸಿದ್ದು, ಅವರ ಕನ್ನಡಕಗಳು ನೆಲಕ್ಕೆಸೆಯಲ್ಪಟ್ಟು, ಅವರ ಎಡ ಪಕ್ಕೆಲುಬಿನ ಮೂಳೆ ಮುರಿತಕ್ಕೊಳಗಾಗಿದೆ. ಸಂಸದ ಪ್ರಮೋದ್ ತಿವಾರಿ ಅವರನ್ನು ಪೊಲೀಸರು ರಸ್ತೆಗೆ ತಳ್ಳಿದ ಪರಿಣಾಮ ತಲೆಗೆ ಗಾಯಗಳಾಗಿದ್ದು ಪಕ್ಕೆಲುಬಿನ ಮೂಳೆ ಮುರಿತಕ್ಕೊಳಗಾಗಿದೆ. ಕೆ.ಸಿ.ವೇಣುಗೋಪಾಲ್ ಪೊಲೀಸ್ ದಾಳಿಗೊಳಗಾಗಿ ಕುಸಿದು ಬಿದ್ದಿದ್ದಾರೆ, ಇದು ಪ್ರಜಾಪ್ರಭುತ್ವವೇ?” ಎಂದು ಪ್ರಶ್ನಿಸಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರನ್ನು ಇಡಿ ಪ್ರಶ್ನಿಸುತ್ತಿದೆ. ನೂರಾರು ಕಾರ್ಯಕರ್ತರು ಮತ್ತು ನಾಯಕರೊಂದಿಗೆ ಕಾಲ್ನಡಿಗೆಯಲ್ಲಿ ರಾಹುಲ್ ಗಾಂಧಿ ದೆಹಲಿಯ ಇಡಿ ಕಚೇರಿಗೆ ಆಗಮಿಸಿದರು. ಅವರೊಂದಿಗೆ ಪ್ರಿಯಾಂಕಾ ಗಾಂಧಿ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಇದ್ದರು. ರಾಹುಲ್ ಗಾಂಧಿ ವಿರುದ್ಧದ ಪ್ರಕರಣವು ರಾಜಕೀಯ ಸೇಡಿನ ಭಾಗವಾಗಿದೆ ಮತ್ತು ಅವರು ಅದನ್ನು ರಾಜಕೀಯವಾಗಿ ಎದುರಿಸುತ್ತಾರೆ ಎಂದು ನಾಯಕರು ಹೇಳಿದರು. ಈ ವಿಚಾರಣೆ ಇಂದೂ ಮುಂದುವರಿಯಲಿದೆ.

- Advertisement -

ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಸ್ಥಾಪಿಸಿದ ದಿ ಯಂಗ್ ಇಂಡಿಯಾ ಕಂಪನಿಯು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾಲೀಕತ್ವವನ್ನು ಹೊಂದಿರುವ ಅಸೋಸಿಯೇಟೆಡ್ ಜರ್ನಲ್ಸ್ ಅನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ. ಸೋನಿಯಾ ಮತ್ತು ರಾಹುಲ್ ಯಂಗ್ ಇಂಡಿಯಾ ಲಿಮಿಟೆಡ್ ನ ಎಂಡಿಗಳು. ನ್ಯಾಷನಲ್ ಹೆರಾಲ್ಡ್ ಹೆಸರಿನಲ್ಲಿ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಯಂಗ್ ಇಂಡಿಯಾವನ್ನು ರಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.



Join Whatsapp