ಹಾಸನ: ಜೂನ್ 13 ರಂದು ನಡೆಯಲಿರುವ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಹಾಗೂ ಪ್ರಗತಿಪರ ಸಂಘಟನೆಗಳ ಬೆಂಬಲಿತ ಅಭ್ಯರ್ಥಿ ಪ್ರಸನ್ನ ಎನ್. ಗೌಡರಿಗೆ ಮೊದಲ ಪ್ರಾಶಸ್ತ್ಯದ ಮತವನ್ನು ನೀಡುವುದರ ಮೂಲಕ ಹೊಸ ನಡೆ-ನುಡಿ ರಾಜಕಾರಣಕ್ಕೆ ಮುನ್ನುಡಿ ಬರೆಯೋಣ ಎಂದು ದಲಿತ ಸಂಘರ್ಷ ಸಮಿತಿ ಹಿರಿಯರಾದ ಹೆಚ್.ಕೆ. ಸಂದೇಶ್ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಕೆ. ಸಂದೇಶ್, ಹಲವು ದಶಕಗಳಿಂದಲೂ ರೈತರ, ಶೋಷಿತರ ಪರ ಹೋರಾಡುತ್ತಲೇ ಬಂದಿದ್ದು, ಪ್ರತಿ ಗ್ರಾಮ ಹೋಬಳಿ ಹಾಗೂ ತಾಲೂಕುಗಳಲ್ಲಿರುವ ಎಲ್ಲಾ ಪದವೀಧರರನ್ನು ಭೇಟಿಯಾಗಿ ಮತ ಕೇಳಲಾಗಿದೆ. ದಲಿತ ಸಂಘರ್ಷ ಸಮಿತಿ ಪ್ರತ್ಯೇಕವಾಗಿದ್ದರೂ ಒಕ್ಕೂಟ ಮಾಡಿಕೊಂಡು ರೈತ ಸಂಘರ್ಷ ಬೆಂಬಲಿತ ಅಭ್ಯರ್ಥಿಗೆ ಬೆಂಬಲ ನೀಡಿದೆ. ರೈತ ಸಂಘ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಕಳೆದ ಎರಡು ವರ್ಷದಿಂದ ಸಕ್ರಿಯವಾಗಿ ದುಡಿಯುತ್ತ ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.
ಇಂದಿನ ಚುನಾವಣೆಯ ರಾಜಕಾರಣದಲ್ಲಿ ಅನೇಕ ಬದಲಾವಣೆ ಆಗಬೇಕಾಗಿದೆ. ವಿಧಾನ ಪರಿಷತ್ತು ಬುದ್ದಿ ಜೀವಿಗಳ, ಹಿರಿಯರ, ಚಿಂತಕರ ಚಾವಡಿ ಆಗಬೇಕಾಗಿದೆ. ಅಲ್ಲಿಗೆ ಚಿನ್ನ, ವಜ್ರ, ಬೆಳ್ಳಿ, ಉದ್ಯಮಿ-ವ್ಯಾಪಾರಿಗಳು, ರಿಯಲ್ ಎಸ್ಟೇಟ್ ಲಾಭಿ ಮಾಡುವವರು ಪ್ರವೇಶ ಮಾಡುತ್ತಿದ್ದಾರೆ. ಸ್ವಜನ ಪಕ್ಷಪಾತ, ಭ್ರಷ್ಠಾಚಾರ ಇವೆಲ್ಲವೂ ಚುನಾವಣೆಯಲ್ಲಿ ಆಗುತ್ತಿದೆ. ಈ ಬಗ್ಗೆ ಎಲ್ಲಾ ಅರಿತು ಸಮಾಜಕ್ಕೆ ನೀಡಬೇಕಾಗಿರುವ ಮತ್ತು ಅವಶ್ಯಕವಾಗಿ ಬೇಕಾಗಿರುವ ಬಗ್ಗೆ ಚಿಂತನೆಯನ್ನು ಹೊಂದಿರುವ ಪ್ರಸನ್ನ ಎನ್. ಗೌಡ ಅವರನ್ನು ಗೆಲ್ಲಿಸುವ ಮೂಲಕ ಹೊಸ ಅಧ್ಯಾಯ ಬರೆಯೋಣ ಎಂದು ಕರೆ ನೀಡಿದರು.
20 ಸಂಘಟನೆಗಳು ಬೆಂಬಲ ಘೋಷಣೆ ಮಾಡಿದ್ದು, ಹೊಸದಾಗಿ 1.45 ಲಕ್ಷ ಮಂದಿ ನೊಂದಾಯಿತರಾಗಿದ್ದಾರೆ ರೈತ ಸಂಘದ ಅಭ್ಯರ್ಥಿ ಮೊದಲ ಪ್ರಾಶಸ್ತ್ಯದ ಮತಗಳಿಂದ ಗೆಲ್ಲುವ ನಿರೀಕ್ಷೆ ಇದೆ. ನಾನು ಚುನಾವಣಾ ಪ್ರಚಾರಕ್ಕೆ ಹೋದಲೆಲ್ಲಾ ಪದವೀಧರರು ಮತ ನೀಡುವ ಭರವಸೆ ನೀಡಿದ್ದಾರೆ. ಹೊಸ ನಡೆ ನುಡಿಯ ರಾಜಕಾರಣಕ್ಕೆ ಮುನ್ನುಡಿ ಬರೆಯುತ್ತಿರುವ ದಿನವಾಗಿದ್ದು, ಚಳವಳಿಗಾರರ ಕನಸು ನನಸಾಗಿಸೋಣ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿವಿಧ ಸಂಘಟನೆಯ ಒಕ್ಕೂಟದ ಕೆ. ಈರಪ್ಪ, ರಾಜಶೇಖರ್, ರೈತ ಸಂಘದ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪೂಣಚ್ಚ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ವಸಂತಕುಮಾರ್, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಎಂ .ಜಿ. ಪೃಥ್ವಿ ಇತರರು ಉಪಸ್ಥಿತರಿದ್ದರು.