ಬೆಂಗಳೂರು: ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ತೆಗೆಸಲು ಸರ್ಕಾರಕ್ಕೆ ಗಡುವು ನೀಡಲು ಪ್ರಮೋದ್ ಮುತಾಲಿಕ್ ಯಾರು? ನ್ಯಾಯಾಲಯದ ಆದೇಶವನ್ನು ಸರಿಯಾಗಿ ತಿಳಿದುಕೊಳ್ಳದೇ ತಾನೇ ಸರ್ಕಾರ, ತನ್ನಿಂದಲೇ ಸರ್ಕಾರ ಎಂಬಂತೆ ವರ್ತಿಸುತ್ತಿರುವ ಗೂಂಡಾ ಪ್ರವೃತ್ತಿಯ ಪ್ರಮೋದ್ ಮುತಾಲಿಕ್ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದು, ಕೂಡಲೇ ಅವರನ್ನು ನಿಮ್ಹಾನ್ಸ್ ಗೆ ದಾಖಲಿಸಬೇಕು ಎಂದು ಚಾಮರಾಜಪೇಟೆ ಶಾಸಕ ಮತ್ತು ಮಾಜಿ ಸಚಿವ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ಆಕ್ರೋಶ ವ್ಯಕ್ತಪಡಿಸಿದರು.
ಹೈಕೋರ್ಟ್ ಆಗಲಿ, ಸುಪ್ರೀಂ ಕೋರ್ಟಾಗಲಿ, ಧ್ವನಿವರ್ಧಕಗಳನ್ನು ತೆಗೆಯುವಂತೆ ಎಲ್ಲಿಯೂ ಸೂಚಿಸಿಲ್ಲ. ಬದಲಾಗಿ, ನಿಗದಿತ ಸ್ಥಳಗಳಲ್ಲಿ, ನಿಗದಿತ ಸಮಯದಲ್ಲಿ ಇಂತಿಷ್ಟು ಡೆಸಿಬಲ್ ಪ್ರಮಾಣದಲ್ಲಿ ಧ್ವನಿವರ್ಧಕಗಳನ್ನು ಬಳಸುವಂತೆ ನ್ಯಾಯಾಲಯ ಆದೇಶಿಸಿದೆ ಮತ್ತು ಧ್ವನಿವರ್ಧಕಗಳ ಬಳಕೆಗೆ ಪರವಾನಗಿ ಪಡೆಯುವುದಕ್ಕಾಗಿಯೇ ಸರ್ಕಾರ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಲು ಅವಕಾಶವನ್ನೂ ನೀಡಿದೆ. ಇದ್ಯಾವುದನ್ನೂ ಸರಿಯಾಗಿ ತಿಳಿದುಕೊಳ್ಳದೇ, ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳಲು ಮನಬಂದಂತೆ ಹೇಳಿಕೆ ನೀಡುತ್ತಿರುವ ಪ್ರಮೋದ್ ಮುತಾಲಿಕ್ ಅವರನ್ನು ಕೂಡಲೇ ನಿಮ್ಹಾನ್ಸ್ ಗೆ ದಾಖಲಿಸುವ ಅಗತ್ಯವಿದೆ ಎಂದು ಶಾಸಕ ಜಮೀರ್ ಖಾರವಾಗಿ ಪ್ರತಿಕ್ರಿಯಿಸಿದರು.