ಚಿಕ್ಕಮಗಳೂರು: 9 ವರ್ಷಗಳ ಕಾಲ ಪ್ರೀತಿಸಿದ ಯುವತಿ ಮದುವೆಗೆ ನಿರಾಕರಿಸಿ ಕೈಕೊಟ್ಟಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಸಮೀಪದ ಶಂಕರಪುರದಲ್ಲಿ ನಡೆದಿದೆ.
ಚೇತನ್ (31) ಆತ್ಮಹತ್ಯೆಗೆ ಶರಣಾದ ಭಗ್ನ ಪ್ರೇಮಿ. ಗೂಡ್ಸ್ ಆಟೋ ಚಾಲಕನಾಗಿದ್ದ ಚೇತನ್ ತುಂಬಾನೇ ಕಷ್ಟ ಜೀವನ ನಡೆಸುತ್ತಿದ್ದ. ಒಬ್ಬನೇ ಮಗನಾಗಿ, ಇಡೀ ಕುಟುಂಬಕ್ಕೆ ಆಧಾರವಾಗಿದ್ದ ಶಂಕರಪುರದ ವಾಸಿಯಾಗಿದ್ದಈತ ಪಕ್ಕದ ಚಿಟ್ಟಿನಾಡು ಗ್ರಾಮದ ಗಾನವಿಯನ್ನು ಗಾಢವಾಗಿ ಪ್ರೀತಿಸುತ್ತಿದ್ದ.
ಇದೀಗ ಆಕೆ ಮದುವೆಗೆ ನಿರಾಕರಿಸಿದಳು ಎಂಬ ಕಾರಣಕ್ಕೆ, ‘ನನಗೆ ಗಾನವಿ ಮೋಸ ಮಾಡಿದಳು’ ಎಂದು ವಾಯ್ಸ್ ಮೆಸೇಜ್ ಕಳಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಾನು ಗಾನವಿ ಒಂಬತ್ತು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದೆವು. ನಾನು ಅವಳಿಗಾಗಿ ಖರ್ಚು ಮಾಡಿರುವ ಹಣ ಹಾಗೂ ಆಕೆ ನನ್ನಿಂದ ಪಡೆದುಕೊಂಡಿರುವ ಹಣ ಸುಮಾರು ನಾಲ್ಕು ಲಕ್ಷ ರೂ., ನನ್ನ ಸಾವಿಗೆ ನನ್ನ ಪ್ರೇಯಸಿಯೇ ಕಾರಣವೆಂದು ಕಳೆದ 9 ವರ್ಷಗಳಿಂದ ಆಕೆಗಾಗಿ ಆತ ಖರ್ಚು ಮಾಡಿರುವ ಹಣದ ಲೆಕ್ಕವನ್ನು ಡೆತ್ ನೋಟ್ ಆಗಿ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
ನನ್ನ ಸಾವಿಗೆ ನ್ಯಾಯ ಸಿಗಬೇಕಾದರೆ ಆಕೆಗೆ ಶಿಕ್ಷೆಯಾಗಬೇಕು. ನನ್ನ ಚಿತೆಗೆ ಗಾನವಿಯೇ ಬೆಂಕಿ ಇಡಬೇಕು, ಆಕೆ ಬರುವತನಕ ಮೃತದೇಹವನ್ನು ಕೆಳಗಿಳಿಸಬೇಡಿ. ನನಗೆ ಗಾನವಿ ಹಾಗೂ ಅವಳ ಸಹೋದರ ಮಾನಸಿಕ ಕಿರುಕುಳ ನೀಡಿದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಸಂಬಂಧಿಕರಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದ.
ಎನ್.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗನ ಅಕಾಲಿಕ ನಿಧನದಿಂದ ಹೆತ್ತವರು ಸೇರಿದಂತೆ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.