ಉತ್ತರ ಪ್ರದೇಶದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಕೇಸರಿ ಬಟ್ಟೆಯಲ್ಲಿ ಮಿಂಚುವ ಸ್ವಾಮೀಜಿ ಅಜಯ್ ಬಿಷ್ತ್ ಅಲಿಯಾಸ್ ಆದಿತ್ಯನಾಥ್ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕಾನೂನು ಸುವ್ಯವಸ್ಥೆ, ಮಾನವ ಹಕ್ಕುಗಳು, ನ್ಯಾಯ, ಪ್ರಜಾಪ್ರಭುತ್ವ, ನೈತಿಕತೆ, ಮೌಲ್ಯ ಇತ್ಯಾದಿ. ಉತ್ತರ ಪ್ರದೇಶದಿಂದ ಬಲವಂತವಾಗಿ ಹೊರಹಾಕಲಾಗಿದೆ ಮತ್ತು ನಾಗರಿಕ ಸಮಾಜದ ತತ್ವಗಳು ಇಲ್ಲಿ ಒಂದಾನೊಂದು ಕಾಲದಲ್ಲಿ ಅನ್ನೋ ಕಥೆ ರೀತಿ ಆಗಿದೆ. ಧರ್ಮಾಂಧತೆ ಉತ್ತರ ಪ್ರದೇಶ ಆಡಳಿತದ ರಾಜಶಾಸನದಂತಾಗಿದೆ. ಆರೆಸ್ಸೆಸ್ ಧರ್ಮಾಂಧರು, ಬೀದಿ ಗೂಂಡಾಗಳು, ಗ್ಯಾಂಗ್‌ಸ್ಟರ್‌ಗಳು ರಾಜ್ಯದ ನಿಯಂತ್ರಣ ಸಾಧಿಸಿದ್ದಾರೆ. ನಾಗರಿಕ ತತ್ವಗಳು ಮತ್ತು ಪ್ರಜಾಪ್ರಭುತ್ವದ ಬಗ್ಗೆ ಆದಿತ್ಯನಾಥ್‌ಗೆ ಗೌರವ ಇಲ್ಲ. ಅವರು ದ್ವೇಷ, ದುರಹಂಕಾರ, ಮಾನಗೇಡಿತನದ ಸ್ವರೂಪವಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಪ್ರತಿರೋಧವನ್ನು ಸಹಿಸಲಾಗುವುದಿಲ್ಲ. ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿ ಮಾಡಲಾಗಿದೆ, ಹಿಂಸಿಸಲಾಗಿದೆ, ಲೂಟಿ ಮಾಡಲಾಗಿದೆ, ಮನಬಂದಂತೆ ಕೊಲ್ಲಲಾಗಿದೆ. ಇವುಗಳು ಮಹಿಳೆಯರು, ಮಕ್ಕಳು ವೃದ್ಧರನ್ನೂ ಬಿಟ್ಟಿಲ್ಲ. ಎನ್‌ಕೌಂಟರ್ ಹತ್ಯೆಗಳು ಕ್ರಿಮಿನಲ್‌ಗಳನ್ನು ನಿರ್ವಹಿಸುವ ಹೊಸ ನಿಯಮ ಎಂಬಂತಾಗಿದೆ ಮತ್ತು ಇದರಲ್ಲಿ ಅಮಾಯಕರೂ ಬಲಿಯಾಗಿದ್ದಾರೆ. ಆಡಳಿತ ಪಕ್ಷದ ಪರವಿರುವ ಕ್ರಿಮಿನಲ್‌ಗಳನ್ನು ರಕ್ಷಿಸಲಾಗುತ್ತದೆ ಮತ್ತು ಉಳಿದವರನ್ನು ಬೀದಿಗಳಲ್ಲಿ ನಾಶ ಮಾಡಲಾಗುತ್ತಿದೆ. ಕಾನೂನು ಬಾಹಿರ ಚಟುವಟಿಕೆಗಳಿಗೆ ಪೊಲೀಸ್ ಪಡೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.
ನಾಗರಿಕ ಸಮಾಜದಲ್ಲಿ, ಒಬ್ಬ ಅತ್ಯಂತ ಕೆಟ್ಟ ಕ್ರಿಮಿನಲ್‌ಗೂ ಕೂಡ ಒಂದು ಒಳ್ಳೆಯ ನ್ಯಾಯಾಂಗ ವಿಚಾರಣೆ ಎದುರಿಸಬಹುದಾದ ಅವಕಾಶವಿದೆ. ಆದರೆ, ಉತ್ತರ ಪ್ರದೇಶದಲ್ಲಿ ಆ ಕಾಲ ಮಾಯವಾಗಿದೆ. ರಾಜ್ಯ ಸರಕಾರವು ಯಾವಾಗ ಬೇಕಾದರೂ ಸುಗ್ರೀವಾಜ್ಞೆಗಳನ್ನು ಪ್ರಕಟಿಸುತ್ತದೆ. ಅದು ಕಾನೂನುಬದ್ಧವಾಗಿದೆಯೋ, ಪ್ರಜಾಸತ್ತಾತ್ಮಕವಾಗಿದೆಯೋ ಅಗತ್ಯವಿಲ್ಲ, ಪೊಲೀಸರ ಮೂಲಕ ಅದನ್ನು ಜಾರಿಗೊಳಿಸಲಾಗುತ್ತದೆ. ಉತ್ತರ ಪ್ರದೇಶ ಪೊಲೀಸರು ಮುಸ್ಲಿಮ್ ವಿರೋಧಿ ದೌರ್ಜನ್ಯಗಳಿಗೆ ಬಹುಕಾಲದಿಂದಲೂ ಕುಖ್ಯಾತರು. ಭಯ ಮತ್ತು ಆತಂಕ ರಾಜ್ಯದಲ್ಲಿ ನೆಲೆಮಾಡಿದೆ. ಇತ್ತೀಚೆಗೆ ಪ್ರಕಟಿಸಲಾಗಿರುವ ಸುಗ್ರೀವಾಜ್ಞೆಗಳ ಪೈಕಿ ಒಂದಾಗಿರುವ ಹೊಸ ಸುಗ್ರೀವಾಜ್ಞೆಯೊಂದರ ಪ್ರಕಾರ, ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿ ಹೋರಾಟಗಳ ವೇಳೆ ಆಸ್ತಿಗಳಿಗೆ ಹಾನಿಯಾಗಿದೆ ಎನ್ನಲಾಗಿರುವಲ್ಲಿ, ಸಿಎಎ/ಎನ್‌ಪಿಆರ್/ಎನ್‌ಆರ್‌ಸಿ ವಿರೋಧಿ ಹೋರಾಟಗಾರರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ. ಕೋವಿಡ್-19 ಲಾಕ್‌ಡೌನ್ ಪ್ರತಿರೋಧಿ ಶಕ್ತಿಗಳನ್ನು ಬೇಟೆಯಾಡಲು ಉತ್ತರ ಪ್ರದೇಶ ಸರಕಾರಕ್ಕೆ ಒಂದು ಮಹತ್ವದ ಅಸ್ತ್ರ ಸಿಕ್ಕಂತಾಗಿದೆ. ಸಿಎಎ ವಿರೋಧಿ ಪ್ರತಿಭಟನಕಾರರು, ವಿದ್ಯಾರ್ಥಿಗಳು, ಸಿಎಎ ವಿರೋಧಿ ಪ್ರತಿಭಟನೆಗಳ ಬೆಂಬಲಿಗ ಕಾರ್ಯಕರ್ತರನ್ನು ಗುರಿ ಮಾಡಲಾಗಿದೆ ಮತ್ತು ಬಂಧಿಸಲಾಗಿದೆ. ಕೋರ್ಟ್‌ಗಳ ಮೂಲಕ ಜಾಮೀನು ಪಡೆದವರಿಗೆ, ಮತ್ತೆ ನಕಲಿ ಕೇಸುಗಳನ್ನು ಹಾಕಿ ಸೆರೆಮನೆಗೆ ತಳ್ಳಲಾಗಿದೆ. ರಾಜ್ಯದಲ್ಲಿ ಇದು ದಿನನಿತ್ಯ ಸಾಮಾನ್ಯವೆಂಬಂತೆ ನಡೆಯುತ್ತಿದೆ. ಸಿಎಎ ವಿರೋಧಿ ಹೋರಾಟಗಳ ವೇಳೆ ಆಸ್ತಿಗಳಿಗೆ ಹಾನಿಯಾಗಿರುವುದಕ್ಕೆ ದಂಡ ಪಾವತಿಸಿ, ಇಲ್ಲವಾದಲ್ಲಿ ತಮ್ಮ ಆಸ್ತಿ ಮುಟ್ಟುಗೋಲು ಹಾಕಿ ಹರಾಜು ಮಾಡಲಾಗುತ್ತದೆ ಎಂಬ ನೋಟಿಸ್‌ಗಳನ್ನು ಸಿಎಎ ವಿರೋಧಿ ಪ್ರತಿಭಟನಕಾರರಿಗೆ ನೀಡಲಾಗುತ್ತಿದೆ.
ದುರದೃಷ್ಟಕರ ಸಂಗತಿ ಏನೆಂದರೆ, ತಾವು ಹುಟ್ಟಿದ ನೆಲದಲ್ಲಿ ಜೀವಿಸುವ ಹಕ್ಕಿಗಾಗಿ ಪ್ರಜಾಸತ್ತಾತ್ಮಕವಾಗಿ ಹೋರಾಟ ಮಾಡಿದ ಜನರ ವಿರುದ್ಧ ಉತ್ತರ ಪ್ರದೇಶ ಗ್ಯಾಂಗ್ ಸ್ಟರ್‌ಗಳು ಮತ್ತು ಸಮಾಜ ವಿರೋಧಿ ಚಟುವಟಿಕೆಗಳ(ತಡೆ) ಕಾಯ್ದೆ 1986(ಗ್ಯಾಂಗ್‌ಸ್ಟರ್ ಕಾಯ್ದೆ ಮತ್ತು ಉತ್ತರ ಪ್ರದೇಶ ಗೂಂಡಾಗಳ ನಿಯಂತ್ರಣ ಕಾಯ್ದೆ 1970 (ಗೂಂಡಾ ಕಾಯ್ದೆ)ಯಡಿ ಪ್ರಕರಣ ದಾಖಲಿಸಲಾಗಿದೆ. ಆದರೆ, ನಿಜವಾದ ಗೂಂಡಾಗಳು, ಗ್ಯಾಂಗ್‌ಸ್ಟರ್‌ಗಳು ಮತ್ತು ಸಮಾಜ ವಿರೋಧಿ ಶಕ್ತಿಗಳು ರಾಜ್ಯಾದ್ಯಂತ ರಾಜಾರೋಷವಾಗಿ ನಿರ್ಭೀತಿಯಿಂದ ತಿರುಗಾಡುತ್ತಿದ್ದಾರೆ.
ಇತ್ತೀಚಿನ ತಿಂಗಳುಗಳಲ್ಲಿ ನಡೆದ ಬಂಧನಗಳಿಗೆ ಸೇರ್ಪಡೆ ಎಂಬಂತೆ, 2019, ಡಿ.19ರಂದು ಲಖನೌದ ಘಂಟಾಘರ್‌ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ 297 ಮಂದಿ ವಿರುದ್ಧ ಜು.8ರಂದು ಉತ್ತರ ಪ್ರದೇಶ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಸುಮಾರು 18 ಪ್ರತಿಭಟನಕಾರರ ವಿರುದ್ಧ ಸುಳ್ಳು ಹಿಂಸಾಚಾರದ ಆಪಾದನೆಗಳ ಮೂಲಕ, ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್‌ಎಸ್‌ಎ)ಯಡಿ ಪ್ರಕರಣ ದಾಖಲಿಸಲು ಸರಕಾರ ಸಿದ್ಧವಾಗಿದೆ. ಬಂಧಿತರಾದವರಲ್ಲಿ, 68 ಮಂದಿಯ ವಿರುದ್ಧ ಉತ್ತರ ಪ್ರದೇಶ ಗ್ಯಾಂಗ್ ಸ್ಟರ್‌ಗಳು ಮತ್ತು ಸಮಾಜ ವಿರೋಧಿ ಚಟುವಟಿಕೆಗಳ(ತಡೆ) ಕಾಯ್ದೆ, 1986ರಡಿ ಆರೋಪ ದಾಖಲಾಗಿದೆ ಮತ್ತು 28 ಮಂದಿ ವಿರುದ್ಧ ಗೂಂಡಾ ಕಾಯ್ದೆಯಡಿ ಆರೋಪ ದಾಖಲಾಗಿದೆ. ಇದೇ ಪ್ರಕರಣದಲ್ಲಿ, 43 ಮಂದಿ ವಿರುದ್ಧ ಜಾಮೀನು ರಹಿತ ಬಂಧನಾದೇಶ ಜಾರಿಗೊಳಿಸಲಾಗಿದೆ.
ಅಸಾಂವಿಧಾನಿಕ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆ ನಡೆಸಿದುದಕ್ಕಾಗಿ, ಹಲವಾರು ಮಾನವ ಹಕ್ಕುಗಳ ಹೋರಾಟ ಸಂಸ್ಥೆಗಳು, ಪ್ರತಿಪಕ್ಷಗಳು ಮತ್ತು ಸಮುದಾಯ ಸಂಸ್ಥೆಗಳ ಕಾರ್ಯಕರ್ತರನ್ನು ವ್ಯಾಪಕವಾಗಿ ಬಂಧಿಸಲಾಗಿದೆ. ‘‘ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸೇರಿದಂತೆ ಹಲವು ಸಂಘಟನೆಗಳ ಸಂಚು ಇರುವುದು ಪತ್ತೆಯಾಗಿದೆ. ಆ ಸಂಘಟನೆಗಳ ಪದಾಧಿಕಾರಿಗಳನ್ನು ಬಂಧಿಸಲಾಗಿದೆ ಮತ್ತು ಜೈಲಿಗೆ ಕಳುಹಿಸಲಾಗಿದೆ. 18 ಆರೋಪಿಗಳ ವಿರುದ್ಧ ಎನ್‌ಎಸ್‌ಎ ದಾಖಲಿಸಲು ನಾವು ಯೋಜಿಸಿದ್ದೇವೆ’’ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಉತ್ತರ ಪ್ರದೇಶ ರಾಜ್ಯದ ತಾತ್ಕಾಲಿಕ ಘಟಕದ ಸಂಚಾಲಕ ವಝೀಮ್ ಅಹ್ಮದ್(ಲಖನೌ), ಸದಸ್ಯ ಮುಫ್ತಿ ಮುಹಮ್ಮದ್ ಶಹಜಾದ್ (ಗಾಝಿಯಾಬಾದ್) ಮತ್ತು ಖಾರಿನಾಸಿರುದ್ದೀನ್ (ಬಿಜನೂರ್) ಸೇರಿದಂತೆ ಹಲವಾರು ಕಾರ್ಯಕರ್ತರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಗಿದೆ. ಹಲವು ದಿನಗಳ ಕಾಲ ಜೈಲಿನಲ್ಲಿದ್ದ ಬಳಿಕ ವಝೀಮ್ ಅಹ್ಮದ್‌ಗೆ ಜಾಮೀನು ಮಂಜೂರಾಗಿತ್ತು. ಆದರೆ, ಅವರ ವಿರುದ್ಧ, ಮತ್ತಷ್ಟು ಸುಳ್ಳು ಪ್ರಕರಣಗಳನ್ನು ದಾಖಲಿಸಿದ ಪೊಲೀಸರು ಅವರನ್ನು ಬಿಡುಗಡೆಗೊಳಿಸದಂತೆ ತಡೆದಿದ್ದಾರೆ. ಇದೀಗ ಅವರಿಗೆ ದಂಡ ವಸೂಲಿಯ ನೋಟಿಸ್ ಮೂಲಕ ಬೆದರಿಸಲಾಗುತ್ತಿದೆ. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಮುಫ್ತಿ ಮುಹಮ್ಮದ್ ಶೆಹಜಾದ್ ಅವರನ್ನು ಇತ್ತೀಚೆಗೆ ಪೊಲೀಸರು ಮತ್ತೊಮ್ಮೆ ಬಂಧಿಸಿದ್ದಾರೆ. ಡಿ.19ರಂದು ಸಿಎಎ ವಿರೋಧಿ ಪ್ರತಿಭಟನಕಾರರ ವಿರುದ್ಧ ನಡೆದಿದ್ದ ಕುಖ್ಯಾತ ಪೊಲೀಸ್ ಹಿಂಸಾಚಾರವನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ್ದಕ್ಕೆ ಪ್ರತೀಕಾರವಾಗಿ ಮುಫ್ತಿ ಮುಹಮ್ಮದ್ ಶೆಹಜಾದ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಡಿ.19ರ ಪ್ರತಿಭಟನೆಯ ವೇಳೆ ಲಖನೌನಲ್ಲಿ ಬಂಧಿತರಾಗಿರುವ ಏಕೈಕ ಮಹಿಳೆ, ಎರಡು ವಾರ ಜೈಲಿನಲ್ಲಿ ಕಳೆದಿದ್ದ ಖ್ಯಾತ ಸಾಮಾಜಿಕ ಕಾರ್ಯಕರ್ತೆ ಸದಾಫ್ ಜಫರ್, ಉತ್ತರ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮುಖ್ಯಸ್ಥ ಶಾನವಾಝ್ ಆಲಂ, ನಗರದ ಪರಿವರ್ತನ್ ಚೌಕ್‌ನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಒಂದು ತಿಂಗಳು ಲಖನೌ ಜಿಲ್ಲಾ ಜೈಲಿನಲ್ಲಿದ್ದ ಮಾನವ ಹಕ್ಕುಗಳ ಕಾರ್ಯಕರ್ತ ಮತ್ತು ರಿಹಾಯಿಮಂಚ್ ಸಂಸ್ಥಾಪಕ ಮುಹಮ್ಮದ್ ಶೋಯಿಬ್, ನಿವೃತ್ತ ಐಪಿಎಸ್ ಅಧಿಕಾರಿ ಎಸ್.ಆರ್.ದಾರಾಪುರಿ ದೋಷಾರೋಪ ಪಟ್ಟಿ ದಾಖಲಿಸಲ್ಪಟ್ಟವರಲ್ಲಿ ಪ್ರಮುಖರು. ಇವರೆಲ್ಲರ ವಿರುದ್ಧ ಒಂದಕ್ಕಿಂತ ಹೆಚ್ಚು ಎಫ್‌ಐಆರ್‌ಗಳು ದಾಖಲಾಗಿವೆ. 2019ರ ಡಿಸೆಂಬರ್‌ನಲ್ಲಿ ದಾರಾಪುರಿ ಮತ್ತು ಸದಾಫ್ ಜಫರ್ ಸಹಿತ ನೂರಾರು ಮಂದಿಯನ್ನು ಪೊಲೀಸರು ಬಂಧಿಸಿದ್ದರು. 2020 ಜನವರಿ 8ರಂದು ದಾರಾಪುರಿ ಮತ್ತು ಸದಾಫ್ ಇಬ್ಬರಿಗೂ ಜಾಮೀನು ಮಂಜೂರಾಯಿತು. ಬಂಧನದ ವೇಳೆ ಪೊಲೀಸರು ತಮ್ಮನ್ನು ಬಾರುಕೋಲುಗಳಿಂದ ತೀವ್ರವಾಗಿ ಥಳಿಸಿ ಹಿಂಸೆ ನೀಡಿದ್ದಾರೆ ಎಂದು ಸದಾಫ್ ಆರೋಪಿಸಿದ್ದಾರೆ. ಪೌರತ್ವ ಪ್ರತಿಭಟನೆಗೆ ಸಂಬಂಧಿಸಿ ಪೊಲೀಸರು ಇತ್ತೀಚೆಗೆ ವಿದ್ಯಾರ್ಥಿ ನಾಯಕ ಶರ್ಜೀಲ್ ಉಸ್ಮಾನಿ ಎಂಬವರನ್ನೂ ಬಂಧಿಸಿದ್ದಾರೆ.
ಹಿಂದಿ ಮತ್ತು ಉರ್ದು ಮಾಧ್ಯಮಗಳಲ್ಲಿ ವರದಿಯಾದ ಕೆಲವು ಘಟನೆಗಳ ವರದಿಗಳನ್ನು ಇಲ್ಲಿ ನೀಡಲಾಗಿದೆ:
23/03/2020: ಅಲಹಾಬಾದ್/ಪ್ರಯಾಗ್ ರಾಜ್: ಖುಲದಾಬಾದ್‌ನ ರೋಶನ್ ಬಾಗ್ ಮನ್ಸೂರ್ ಅಲಿ ಪಾರ್ಕ್‌ನಲ್ಲಿ 72 ದಿನಗಳಿಂದ ಸಿಎಎ ವಿರೋಧಿ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಯಲ್ಲಿ ಭಾಗವಹಿಸಿದ 17 ಮಂದಿ ಹೆಸರಿಸಲ್ಪಟ್ಟ ಮತ್ತು 100 ಮಂದಿ ಹೆಸರಿಲ್ಲದ ವ್ಯಕ್ತಿಗಳ ವಿರುದ್ಧ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
14/05/2020 ಅಲಿಗಢ್: ಅಲಿಗಢ್ ಮುಸ್ಲಿಮ್ ವಿಶ್ವವಿದ್ಯಾಲಯ (ಎಎಂಯು)ದಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯ ವೇಳೆ ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ಡಾ. ಕಫೀಲ್ ಖಾನ್ ವಿರುದ್ಧ ಎನ್‌ಎಸ್‌ಎ ಹೇರಲಾಗಿದೆ. ಪ್ರಸ್ತುತ ಅವರು ಮಥುರಾ ಜೈಲಿನಲ್ಲಿದ್ದಾರೆ.
29/05/2020: ಅಲಿಗಢ್: ಸುಮಾರು 12 ಪ್ರಕರಣಗಳಲ್ಲಿ ಆರೋಪಿಯಾಗಿಸಿ ವಿದ್ಯಾರ್ಥಿ ನಾಯಕ ಫರ್ಹಾನ್ ಜುಬೈರಿ ಅವರನ್ನು ಬಂಧಿಸಲಾಗಿದೆ. ಫರ್ಹಾನ್ ಜನಪದ ಬದಾಯೂನ ಇಸ್ಲಾಮ್ ನಗರ ನಿವಾಸಿಯಾಗಿದ್ದು, ಎಎಂಯುನಲ್ಲಿ ಎಂಎಸ್‌ಡಬ್ಲೂ ವಿದ್ಯಾರ್ಥಿ. ಸಿಎಎ ವಿರೋಧಿ ಪ್ರತಿಭಟನೆಯ ವೇಳೆ ಎಎಂಯುನಲ್ಲಿ ನಡೆದ ಹಿಂಸಾಚಾರದ ಆರೋಪಕ್ಕೊಳಗಾಗಿರುವ 1100 ವಿದ್ಯಾರ್ಥಿಗಳಲ್ಲಿ ಅವರೂ ಒಬ್ಬರು.
05/06/2020: ಅಲಿಗಢ್: ಫೆ.23ರ ಸಿಎಎ ವಿರೋಧಿ ಪ್ರತಿಭಟನೆಗಾಗಿ ಇಮ್ರಾನ್ ಅನ್ವರ್ ಆರ್/ಒ ಭೂಜ್ ಪುರ, ಸಾಬಿರ್ ಅಲಿಯಾಸ್ ಮಿಲನ್ ಆರ್/ಒ ಕಂಜರನ್ ಮತ್ತು ಫಹೀಮುದ್ದೀನ್ ಆರ್/ಒ ಖೈದೋರಾ ಮುಂತಾದ ನಾಲ್ವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಹೇರಲಾಗಿದೆ.
18/06/2020 ಲಖನೌ: ಸಿಎಎ/ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಾಗಿ ಮೊಹ್ಸಿನ್, ಅಸ್ಲಾಮ್, ಅಯಾಝ್, ಸಲ್ಮಾನ್, ಮುಲ್ಲು ಅಲಿಯಾಸ್ ವಾರಿಸ್ ಮತ್ತು ರಿಹಾನ್ ಮುಂತಾದ ಆರು ಮಂದಿಯ ವಿರುದ್ಧ ಗ್ಯಾಂಗ್‌ಸ್ಟರ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆ.4ರ ವರೆಗೆ ಜೈಲಿಗೆ ಕಳುಹಿಸಲಾಗಿದೆ. ಈ ಕಾಯ್ದೆಯಡಿ ಲಖನೌನಲ್ಲಿ 55 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಠಾಕೂರ್ ಗಂಜ್‌ನ 25 ಮಂದಿ ಮತ್ತು ಖೈಸರ್ ಬಾಗ್ ಮತ್ತು ಹಂಸಗಂಜ್‌ನ ತಲಾ 15 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಅವರಲ್ಲಿ 10 ಮಂದಿಯನ್ನು ಮರು ಬಂಧಿಸಲಾಗಿದೆ.
19/06/2020: ಲಖನೌ: ಐಪಿಸಿ ಕಲಂಗಳಾದ 143, 147, 188, 353ರಡಿ ಪ್ರಕರಣಗಳನ್ನು ದಾಖಲಿಸಲ್ಪಟ್ಟಿರುವುದರಿಂದ ಸಿಎಎ ವಿರೋಧಿ ಮಹಿಳಾ ಪ್ರತಿಭಟನಕಾರರಾದ ಸುಮಯ್ಯ ರಾಣಾ D/o. ಮುನವ್ವರ್ ರಾಣಾ (ಉರ್ದು ಕವಿ), ಉಸ್ಮಾ ಪರ್ವೀನ್, ಸದಾಫ್ ಜಫರ್ ಮುಂತಾದವರ ವಿರುದ್ಧ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.
4/07/2020: ಬಿಜನೂರ್: 2019 ಡಿಸೆಂಬರ್ 20ರಂದು ಬಿಜನೂರ್‌ನಲ್ಲಿ ಸಿಎಎ ವಿರೋಧಿ ಹಿಂಸಾಚಾರದ ವೇಳೆ ಸುಲೈಮಾನ್ ಎಂಬವರ ಹತ್ಯೆ ಮಾಡಿರುವ ಪೊಲೀಸರ ವಿರುದ್ಧದ ಆರೋಪಗಳು ಸುಳ್ಳು ಎಂದು ಎಸ್‌ಐಟಿ ನಿರ್ಧರಿಸಿದೆ. ಸುಲೈಮಾನ್ ನಮಾಝ್ ಮುಗಿಸಿ ಹಿಂದಿರುಗುವಾಗ ಪೊಲೀಸರು ಆತನ ಮೇಲೆ ಗುಂಡಿನ ದಾಳಿ ನಡೆಸಿರುವ ಬಗ್ಗೆ ಎಸ್ ಎಚ್ ಒ ರಾಜೇಶ್ ಸೋಳಂಕಿ, ಆಶಿಶ್ ತೋಮರ್, ಮೋಹಿತ್ ಮತ್ತು ಇತರ ಮೂವರ ವಿರುದ್ಧ ಅವರ ಸಹೋದರ ಶೋಯಿಬ್ ದೂರು ದಾಖಲಿಸಿದ್ದಾರೆ.
ನಷ್ಟ ಎಸಗಿದುದಕ್ಕಾಗಿ ಸುಮಾರು ರೂ.64 ಲಕ್ಷ ದಂಡ ಪಾವತಿಸಬೇಕು ಎಂದು ಸದಾಫ್ ಜಫರ್, ಎಸ್.ಆರ್.ದಾರಾಪುರಿ, ಮುಹಮ್ಮದ್ ಶೋಯಿಬ್ ಮತ್ತು ರಾಬಿನ್ ವರ್ಮಾ ಮುಂತಾದ ಹಲವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ‘‘ಪ್ರತಿಭಟನೆಯ ವೇಳೆ ಸಾರ್ವಜನಿಕ ಆಸ್ತಿ ಹಾನಿಗೊಳಿಸಿದ್ದಕ್ಕಾಗಿ ಏಳು ದಿನಗಳೊಳಗೆ ನೀವುಗಳು ರೂ.64,27,637 ಪಾವತಿಸಬೇಕು’’ ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ. ದಾರಾಪುರಿ ಅವರು ಗೃಹಬಂಧನದಲ್ಲಿದ್ದರು, ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸಲು ಅವರನ್ನು ಬಿಟ್ಟಿರಲಿಲ್ಲ. ಆದರೂ, ಅವರ ಆಸ್ತಿ ಮುಟ್ಟುಗೋಲು ಹಾಕುವ ಬಗ್ಗೆ, ಅವರಿಗೆ ಹಲವು ಬಾರಿ ನೋಟಿಸ್ ಕಳುಹಿಸಲಾಗಿದೆ.
ಪೌರತ್ವ ಪ್ರತಿಭಟನೆಯ ವೇಳೆ ತಪ್ಪು ಮಾಡಿದವರನ್ನು ಶಿಕ್ಷಿಸುವ ನೆಪದಲ್ಲಿ ಜನರನ್ನು ನಿರಂತರವಾಗಿ ಕಿರುಕುಳಕ್ಕೆ ಗುರಿಪಡಿಸುವ ಪೊಲೀಸರ ದುರುದ್ದೇಶಗಳನ್ನು ಈ ಕೆಳಗಿನ ಕೆಲವು ಪ್ರಕರಣಗಳಿಂದ ತಿಳಿಯಬಹುದು:
ಜು.2ರಂದು ಖುರ್ರಂ ನಗರದ ಮುಹಮ್ಮದ್ ನಫೀಸ್ ಎಂಬವರಿಗೆ ಸೇರಿದ ವೆಲ್ಡಿಂಗ್ ವರ್ಕ್‌ಶಾಪ್‌ಅನ್ನು ಆಡಳಿತವು ಮುಟ್ಟುಗೋಲು ಹಾಕಿದೆ. 2019, ಡಿ.19ರಂದು ಹಝ್ರತ್‌ಗಂಜ್‌ನಲ್ಲಿ ಬೆಂಕಿ ಹಚ್ಚಿದ ಮತ್ತು ದಾಂಧಲೆ ನಡೆಸಿದ ಆರೋಪದಲ್ಲಿ ಅವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಹಝ್ರತ್‌ಗಂಜ್ ಪ್ರದೇಶದಲ್ಲಿ ನಗರಾಡಳಿತ ಎರಡು ಅಂಗಡಿಗಳನ್ನು ಹರಾಜು ಮಾಡಲು ಯೋಜಿಸುತ್ತಿದೆ. ಹರಾಜಿಗೆ ಉದ್ದೇಶಿಸಲಾದ ಆಸ್ತಿಗಳಲ್ಲಿ ಒಂದು ಆಸ್ತಿ, ನೋಟಿಸ್ ಜಾರಿಗೊಳಿಸಲಾದ ವ್ಯಕ್ತಿಗೆ ಸೇರಿದುದಲ್ಲ. ಎನ್.ವೈ. ಫ್ಯಾಶನ್ ಬಝಾರ್‌ನ ಬಿಗ್ ಗಾರ್ಮೆಂಟ್ ಸ್ಟೋರ್ ಮತ್ತು ಜಂಕ್ ಶಾಪ್ ಹರಾಜಿಗೆ ಉದ್ದೇಶಿಸಲಾದ ಎರಡು ಅಂಗಡಿಗಳು. ಎನ್.ವೈ.ಫ್ಯಾಶನ್ ಬಝಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಸಹಾಯಕ ಮ್ಯಾನೇಜರ್ ಧರಂವೀರ್ ಸಿಂಗ್ ಅವರನ್ನು ಡಿ.19ರಂದು ಬಂಧಿಸಲಾಗಿದೆ ಮತ್ತು ಸಾರ್ವಜಿಕ ಆಸ್ತಿಗೆ ಹಾನಿ ತಡೆ ಕಾಯ್ದೆ ಮತ್ತು ಐಪಿಸಿ ಕಲಂ 307ರಡಿ ಪ್ರಕರಣ ದಾಖಲಿಸಲಾಗಿದೆ. ಒಂದು ತಿಂಗಳ ಬಳಿಕ ಅವರು ಜಾಮೀನು ಮೂಲಕ ಬಿಡುಗಡೆಯಾದರು. ಆದರೆ, ಫ್ಯಾಶನ್ ಬಝಾರ್ ಮುಟ್ಟುಗೋಲುಗೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ಧರಂವೀರ್ ಸಿಂಗ್ ಜೈಲಿನಲ್ಲಿದ್ದಾಗಲೇ ಆಸ್ತಿ ಮುಟ್ಟುಗೋಲು ನೋಟಿಸ್ ಜಾರಿಗೊಳಿಸಲಾಗಿತ್ತು.
ಹರಾಜುಗೊಳ್ಳಲಿರುವ ಇನ್ನೊಂದು ಆಸ್ತಿ ಮಹೆನೂರ್ ಚೌಧರಿಯವರಿಗೆ ಸೇರಿದ ಖಾದ್ರಾ ಪ್ರದೇಶದ ಜಂಕ್‌ಶಾಪ್. ಲಾಕ್ ಡೌನ್‌ನಿಂದಾಗಿ ಕಷ್ಟದಲ್ಲಿ ದಿನದೂಡುತ್ತಿರುವ ತನ್ನಂತಹ ಜನರಿಗೆ ಇಂತಹ ಆದೇಶ ಜಾರಿಗೊಳಿಸಿರುವುದು ದೊಡ್ಡ ಹೊಡೆತ ಎಂದು ಚೌಧರಿ ಹೇಳುತ್ತಾರೆ. ಡಿ.19ರ ಪ್ರತಿಭಟನೆಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದ್ದಾರೆ. ‘‘ನಾನು ಹಾದುಹೋಗುತ್ತಿದ್ದಾಗ, ಜನಜಂಗುಳಿ ಸೇರಿದ್ದುದನ್ನು ನೋಡಿ, ಏನು ನಡೆಯುತ್ತಿದೆ ಎಂದು ನೋಡಿದ್ದೆ ಅಷ್ಟೇ. ಪೊಲೀಸರು ಆ ವೇಳೆ ಫೋಟೊ ತೆಗೆದಿದ್ದರು. ಅದರಲ್ಲಿ ನಾನು ಹಿಂಸಾಚಾರದಲ್ಲಿ ತೊಡಗಿರುವುದೇನೂ ಕಾಣುತ್ತಿಲ್ಲ’’ ಎಂದು ಚೌಧರಿ ಹೇಳುತ್ತಾರೆ. ಡಿ.24ರಂದು ಖಾದ್ರಾದ ತಮ್ಮ ಮನೆಯಿಂದ ಚೌಧರಿ ಅವರನ್ನು ಬಂಧಿಸಲಾಗಿತ್ತು. ಇದೇ ರೀತಿಯ ಆರೋಪಗಳನ್ನು ಹೊತ್ತ ಧರಂವೀರ್ ಜಾಮೀನು ಸಿಗುವುದಕ್ಕೂ ಮೊದಲು ಒಂದು ತಿಂಗಳು ಜೈಲಿನಲ್ಲಿದ್ದರು. ತಾವು ಜೈಲಿನಲ್ಲಿದ್ದುದರಿಂದ, ಆಸ್ತಿ ಮುಟ್ಟುಗೋಲು ನೋಟಿಸ್ ಗೆ ಪ್ರತಿಕ್ರಿಯಿಸಲು ಸಾಧ್ಯವಾಗಿರಲಿಲ್ಲ. ಇದೀಗ ನಗರಾಡಳಿತ ತನ್ನ ಸಂಬಂಧಿಕರಿಗೆ ಸೇರಿದ ಸ್ಟೋರ್ ಅನ್ನು ಮುಟ್ಟುಗೋಲು ಹಾಕಿದೆ.
ದಂಡ ಪಾವತಿಸಲು ಸಾಧ್ಯವಾಗದಿದ್ದುದಕ್ಕೆ ಮುಹಮ್ಮದ್ ಖಲೀಲ್ ಎಂಬವರನ್ನು ಜು.3ರಂದು ಮತ್ತೊಮ್ಮೆ ಬಂಧಿಸಲಾಗಿದೆ. ಹಸನ್ ಗಂಜ್ ಪ್ರದೇಶದಲ್ಲಾದ ನಷ್ಟಗಳಿಗೆ ರೂ.21.76 ಲಕ್ಷ ಪಾವತಿಸಬೇಕೆಂದು ಆದೇಶ ಪಡೆದ 13 ಮಂದಿಯಲ್ಲಿ ಖಲೀಂ ಕೂಡ ಒಬ್ಬರು. ಡಿಸೆಂಬರ್ ನಲ್ಲಿ ಜೈಲಿನಲ್ಲಿದ್ದಾಗ್ಯೂ, ಅವರನ್ನು ಮತ್ತೊಮ್ಮೆ ಯಾಕೆ ಬಂಧಿಸಿದರು ಎಂದು ತಮಗೆ ಅರ್ಥವಾಗುತ್ತಿಲ್ಲ ಎಂದು ಖಲೀಂರ ಪತ್ನಿ ನರ್ಗೀಸ್ ಹೇಳುತ್ತಾರೆ.
ಮೇಲೆ ತಿಳಿಸಲಾದ ಪ್ರಕರಣಗಳಿಂದ ಉತ್ತರ ಪ್ರದೇಶ ಸರಕಾರದ ಸರ್ವಾಧಿಕಾರಿ ಲಕ್ಷಣ ಮತ್ತು ಪೊಲೀಸರ ವ್ಯಾಪಕ ದುರ್ಬಳಕೆಯ ಅಂಶಗಳು ಗೊತ್ತಾಗುತ್ತವೆ. ಮೇಲೆ ತಿಳಿಸಲಾದ ಬಂಧನ ಮತ್ತು ಆಸ್ತಿ ಮುಟ್ಟುಗೋಲು ಪ್ರಕರಣಗಳು ಯೋಗಿ ಸರಕಾರದ ಪ್ರಜಾಸತ್ತಾತ್ಮಕ ವಿರೋಧಿ ಚಟುವಟಿಕೆಗಳಿಗೆ ಕೊನೆಯೇ ಇಲ್ಲವೆಂಬುದನ್ನು ಸೂಚಿಸುತ್ತದೆ. ಪ್ರತಿರೋಧಿ ಧ್ವನಿಗಳು, ಟೀಕಾಕಾರರು, ಆಡಳಿತಗಾರರ ಅಕ್ರಮಗಳು ಮತ್ತು ಅದಕ್ಷತೆಯನ್ನು ಪ್ರಶ್ನಿಸುವ ಪತ್ರಕರ್ತರು ಸರಕಾರದಿಂದ ತಮ್ಮ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗುವ ಭೀತಿಯಲ್ಲಿದ್ದಾರೆ.
ತಮ್ಮ ಆಧ್ಯಾತ್ಮಿಕ-ಕಮ್-ರಾಜಕೀಯ ಜೀವನದುದ್ದಕ್ಕೂ ಹಲವು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸಿರುವ ಮುಖ್ಯಮಂತ್ರಿ ಆದಿತ್ಯನಾಥ್ ಅಂತಹವರಿಂದ ಕಾನೂನು, ಪ್ರಜಾಪ್ರಭುತ್ವ ಮತ್ತು ಭಾರತದ ಸಂವಿಧಾನವನ್ನು ಗೌರವಿಸುವ ನೀತಿ, ಆಡಳಿತ ಸಿಗುವುದೆಂದು ನಿರೀಕ್ಷಿಸಲು ಸಾಧ್ಯವಿಲ್ಲ. 2017ರ ಮಾರ್ಚ್‌ನಲ್ಲಿ ಯೋಗಿ ಸರಕಾರ ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಸರಣಿ ಎನ್‌ಕೌಂಟರ್‌ಗಳಲ್ಲಿ ಇತ್ತೀಚೆಗೆ ನಡೆದ ವಿಕಾಸ್ ದುಬೆ ಎನ್‌ಕೌಂಟರ್ 119ನೇಯದ್ದು. ಕ್ರಿಮಿನಲ್‌ಗಳ ನಡುವೆ ಉನ್ನತ ರಾಜಕೀಯ ವ್ಯಕ್ತಿಗಳು ಮತ್ತು ಪೊಲೀಸರ ನಡುವಿನ ಸಂಬಂಧಗಳ ಮೇಲೆ ಬೆಳಕು ಚೆಲ್ಲಬಹುದಾದ ವಿಚಾರಣೆಗಳನ್ನು ತಪ್ಪಿಸುವ ಸಲುವಾಗಿ, ಇಂತಹ ಎನ್‌ಕೌಂಟರ್‌ಗಳನ್ನು ನಡೆಸಲಾಗುತ್ತಿದೆ.
ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರದಡಿ ಉತ್ತರ ಪ್ರದೇಶದದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಸಂಘಪರಿವಾರದ ಗೂಂಡಾಗಳನ್ನು ರಕ್ಷಿಸಲು ಮತ್ತು ಅಲ್ಪಸಂಖ್ಯಾತರು, ಪ್ರತಿಪಕ್ಷಗಳು ಹಾಗೂ ಮಾನವ ಹಕ್ಕು ಹೋರಾಟಗಾರರನ್ನು ಗುರಿಯಾಗಿಸಲು ಕ್ರಿಮಿನಲ್ ಗ್ಯಾಂಗ್‌ಅನ್ನು ನಿಯೋಜಿಸಲಾಗಿದೆ ಅನ್ನೋ ಮಟ್ಟಕ್ಕೆ ಪೊಲೀಸ್ ಪಡೆ ಇಳಿದಿದೆ. ಪ್ರಸ್ತುತ ಸರಕಾರ ಅಧಿಕಾರದಲ್ಲಿ ಮುಂದುವರೆಯಲು ಯಾವುದೇ ಕಾನೂನುಬದ್ಧ ಹಾಗೂ ನೈತಿಕ ಹಕ್ಕು ಹೊಂದಿಲ್ಲ. ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆಯ ವಿಷಯ ಬರುವಾಗ, ಕೇಂದ್ರದ ಆರೆಸ್ಸೆಸ್ ನಿಯಂತ್ರಿತ ನರೇಂದ್ರ ಮೋದಿ ಮತ್ತು ಅಮಿತ್ ಶಾ ನೇತೃತ್ವದ ಸರಕಾರ ಕಣ್ಣಾಮುಚ್ಚಾಲೆಯಾಟ ಆಡುತ್ತಿದೆ. ಉತ್ತರ ಪ್ರದೇಶದಲ್ಲಿ ಅರಾಜಕತೆ ಕೊನೆಗೊಳಿಸಲು ಮತ್ತು ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲು ಪರಿಚ್ಛೇದ 356ರನ್ನು ಜಾರಿಗೊಳಿಸಲು ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರಪತಿ ಸ್ವಯಂಪ್ರೇರಿತ ಮಧ್ಯಪ್ರವೇಶ ಮಾಡುವ ಅಗತ್ಯವಿದೆ. ಆದರೆ ಕೇಸರೀಕರಣಗೊಂಡ ವ್ಯವಸ್ಥೆಯಲ್ಲಿ, ಇಂತಹ ನಿರೀಕ್ಷೆಯನ್ನು ಹೊಂದುವುದು ಕೇವಲ ಭರವಸೆಯಾಗಿ ಉಳಿಯಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೌರ್ಜನ್ಯಗಳನ್ನು ತಡೆಗಟ್ಟಲು, ಹಕ್ಕುಗಳನ್ನು ರಕ್ಷಿಸಲು ಮತ್ತು ನ್ಯಾಯವನ್ನು ಸ್ಥಾಪಿಸಲು ಸಾರ್ವಜನಿಕ ಅಭಿಪ್ರಾಯ ಮತ್ತು ರಾಜಕೀಯ ಒತ್ತಡ ಅತ್ಯಂತ ಪ್ರಭಾವಿ ಅಸ್ತ್ರವಾಗಿದೆ. ರಾಷ್ಟ್ರ ರಾಜಧಾನಿಯ ಪರಿಸ್ಥಿತಿಗಳ ಬಗ್ಗೆ ದೊಡ್ಡ ಬೆಳಕು ಚೆಲ್ಲಲಾಗುತ್ತದೆಯಾದರೂ, ಅದರ ಪಕ್ಕದಲ್ಲೇ ಇರುವ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಭೀಕರ ದುಸ್ಥಿತಿಯ ಪರಿಸ್ಥಿತಿ ರಾಷ್ಟ್ರೀಯ ಮಟ್ಟದಲ್ಲಿ ಗಂಭೀರ ಕಳವಳಕ್ಕೆ ಕಾರಣವಾಗಿಲ್ಲ. ಮೌನವು ಫ್ಯಾಶಿಸಂ ಮೆರೆಯಲು ಅತ್ಯುತ್ತಮ ವಾತಾವರಣವನ್ನು ಕಲ್ಪಿಸಿಕೊಡುತ್ತದೆ. ಹೀಗಾಗಿ ಭಾರತದಾದ್ಯಂತ ಇರುವ ನಾಗರಿಕ ಹಕ್ಕುಗಳ ಹೋರಾಟ ಸಂಸ್ಥೆಗಳು ಮತ್ತು ಸಮುದಾಯ ಸಂಘಟನೆಗಳು, ಉತ್ತರ ಪ್ರದೇಶದಲ್ಲಿ ನ್ಯಾಯ ಮತ್ತು ಶಾಂತಿ ಮರುಸ್ಥಾಪಿಸಲು ಧ್ವನಿ ಎತ್ತುವ ಮತ್ತು ಸಾರ್ವಜನಿಕ ಅಭಿಪ್ರಾಯ ರೂಪಿಸುವ ಅತ್ಯಗತ್ಯ ಸೃಷ್ಟಿಯಾಗಿದೆ. ಉತ್ತರ ಪ್ರದೇಶ ಮತ್ತು ದೇಶವನ್ನು ಫ್ಯಾಶಿಷ್ಟರ ಬಿಗಿಹಿಡಿತದಿಂದ ರಕ್ಷಿಸಬೇಕಾದರೆ, ಎಲ್ಲ ಫ್ಯಾಶಿಸ್ಟ್ ವಿರೋಧಿ ಶಕ್ತಿಗಳು ತಮ್ಮ ರಾಜಕೀಯ ನಿಲುವು ಮತ್ತು ಅಭಿಪ್ರಾಯ ಭೇದಗಳನ್ನು ಮರೆತು ಒಂದಾಗಬೇಕಾಗಿದೆ.
(ಇದು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಿಡುಗಡೆಗೊಳಿಸಿರುವ ವರದಿಯಾಗಿದೆ.)