ಹಾಸನ: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳ ಹೆಸರಲ್ಲಿ ವಿವಿಧ ಸಾರ್ವಜನಿಕ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರಿಗೆ ಬೆದರಿಕೆ ಕರೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಮೂಲದ ಮುರಿಗೆಪ್ಪಾ ನಿಂಗಪ್ಪ ಕಂಬಾರ (56), ಹಾಸನ ಜಿಲ್ಲೆಯ ರಜನಿಕಾತ್ (46) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳು ಬೇರೆಯವರ ಹೆಸರಿನಲ್ಲಿ ಸಿಮ್ ಖರೀದಿಸಿ ಸಾರ್ವಜನಿಕ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಕರೆ ಮಾಡುತ್ತಿದ್ದರು. ನಿಮ್ಮ ಮೇಲೆ ಎಸಿಬಿ ದಾಳಿ ಮಾಡುತ್ತೇವೆ. ದಾಳಿಯಿಂದ ತಪ್ಪಿಸಿಕೊಳ್ಳಬೇಕಾದರೆ ಕೂಡಲೇ ನಮ್ಮ ಬ್ಯಾಂಕ್ ಖಾತೆಗೆ ಆನ್ ಲೈನ್ ಮೂಲಕ ಹಣ ಹಾಕಿ ಎಂದು ಬೆದರಿಕೆ ಹಾಕುತ್ತಿದ್ದರು. ಈ ಬಗ್ಗೆ ರಾಜ್ಯಾದ್ಯಂತ ಹಲವು ಪ್ರಕರಣ ದಾಖಲಾಗಿದ್ದವು. ಆರೋಪಿ ಮುರಿಗೆಪ್ಪ ಸುಮಾರು 40ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಹಾಗೂ ರಜನಿಕಾಂತ್ 6ಕ್ಕೂ ಹೆಚ್ಚು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ. ಖಚಿತವಾದ ಮಾಹಿತಿಯನ್ನು ಆಧರಿಸಿ ಆರೋಪಿಗಳನ್ನು ಬಂಧಿಸಿರುವ ನಗರ ಪೊಲೀಸರು, ಮೊಬೈಲ್ ಹಾಗೂ ಸಿಮ್ ಗಳನ್ನು ವಶಕ್ಕೆ ಪಡೆದಿದ್ದಾರೆ.