ಆಫ್ರಿಕಾ ನೆಲದಲ್ಲಿ ಚೊಚ್ಚಲ ಏಕದಿನ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿದ ಬಾಂಗ್ಲಾದೇಶ !

Prasthutha|

ಸೆಂಚೂರಿಯನ್: ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಅತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು 38 ರನ್’ಗಳಿಂದ ಸದೆಬಡಿದ ಬಾಂಗ್ಲಾದೇಶ ತಂಡವು ಇದೇ ಮೊದಲ ಬಾರಿಗೆ ಆಫ್ರಿಕಾದ ನೆಲದಲ್ಲಿ ಏಕದಿನ ಪಂದ್ಯವನ್ನು ಗೆದ್ದ ಐತಿಹಾಸಿಕ ಸಾಧನೆ ಮಾಡಿದೆ.

- Advertisement -

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಇದಕ್ಕೂ ಮೊದಲು 19 ಏಕದಿನ ಪಂದ್ಯಗಳನ್ನು ಆಡಿದ್ದ ಬಾಂಗ್ಲಾದೇಶ ಗೆಲುವಿನ ಖಾತೆ ತೆರೆಯುವಲ್ಲಿ ವಿಫಲವಾಗಿತ್ತು.

ಸೆಂಚೂರಿಯನ್’ನ ಸೂಪರ್ ಸ್ಲೋರ್ಟ್ಸ್ ಪಾರ್ಕ್’ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟ್ ಮಾಡಿದ ಬಾಂಗ್ಲಾದೇಶ ಆರಂಭಿಕ ಲಿಟನ್ ದಾಸ್, ಆಲ್’ರೌಂಡರ್ ಶಾಕಿಬ್ ಅಲ್ ಹಸನ್ ಹಾಗೂ ಯಾಸಿರ್ ಅಲಿ ಗಳಿಸಿದ ಅರ್ಧಶತಕಗಳ ನೆರವಿನಿಂದ 7 ವಿಕೆಟ್ ನಷ್ಟದಲ್ಲಿ 314 ರನ್’ಗಳಿಸಿತ್ತು. ಆದರೆ ಚೇಸಿಂಗ್ ವೇಳೆ 48.5 ಓವರ್‌’ಗಳಲ್ಲಿ 276 ರನ್ ಗಳಿಸುವಷ್ಟರಲ್ಲಿ ಬವುಮಾ ಪಡೆ ಸರ್ವಪತನ ಕಂಡಿತು. ಒಂದು ಹಂತದಲ್ಲಿ ವೆನ್ ಡೆರ್ ಡುಸ್ಸೆನ್ [ 86] ಹಾಗೂ ಅನುಭವಿ ಡೇವಿಡ್ ಮಿಲ್ಲರ್ [ 77] ಆಕರ್ಷಕ ಜೊತೆಯಾಟ ಪ್ರದರ್ಶಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಪ್ರಯತ್ನ ನಡೆಸಿದರಾದರೂ ಯಶಸ್ವಿಯಾಗಲಿಲ್ಲ.
ಬಾಂಗ್ಲಾದೇಶದ ಪರ ಮೆಹ್ದಿ ಹಸನ್ 4 ವಿಕೆಟ್ ಪಡೆದರೆ, ತಸ್ಕೀನ್ ಅಹ್ಮದ್ ಮೂರು ಪ್ರಮುಖ ವಿಕೆಟ್ ಪಡೆದು ಮಿಂಚಿದರು. ಆಫ್ರಿಕಾ ಪರ ಕೇಶವ್ ಮಹರಾಜ್ ಹಾಗೂ ಜಾನ್ಸೆನ್ ತಲಾ 2 ವಿಕೆಟ್ ಪಡೆದರು.



Join Whatsapp