ಮಂಗಳೂರು: ದ.ಕ ಜಿಲ್ಲಾ ಪ್ರಭಾರ ಹಾಗೂ ಉಡುಪಿ ಜಿಲ್ಲಾ ಅರಣ್ಯ ಸಂಚಾರಿ ದಳದ ಅಧಿಕಾರಿಯ ವರ್ಗಾವಣೆಗೆ ಪತ್ರ ಬರೆದು ಒತ್ತಡ ಹಾಕಿದ ಪ್ರಕರಣದಲ್ಲಿ ಅಧಿಕಾರಿಯ ವರ್ಗಾವಣೆಯನ್ನು ಸರ್ಕಾರ ತಡೆಹಿಡಿದಿದೆ. ಈ ಮೂಲಕ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾರವರಿಗೆ ತೀವ್ರ ಮುಖಭಂಗವಾಗಿದೆ.
ಶಾಸಕ ಹರೀಶ್ ಪೂಂಜಾ ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದು, ಆ ಪತ್ರದಲ್ಲಿ ಅಧಿಕಾರಿ ಸಂಧ್ಯಾ ಸಚಿನ್ ಅವರನ್ನು ದೂರದ ಬೀದರ್ ಗೆ ವರ್ಗಾಯಿಸುವಂತೆ ಕೋರಲಾಗಿತ್ತು.
ಬೆಳ್ತಂಗಡಿ ಕ್ಷೇತ್ರ ವ್ಯಾಪ್ತಿಗೆ ಸೇರಿದ ಪ್ರದೇಶದಲ್ಲಿ ಮರಗಳ್ಳತನದ ವಿರುದ್ದ ದಾಳಿ ನಡೆಸಿ ಕ್ರಮ ಕೈಗೊಂಡಿದ್ದರಿಂದ ಅಧಿಕಾರಿಯನ್ನು ವರ್ಗಾಯಿಸುವಂತೆ ಶಾಸಕರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಆರೋಪಗಳು ಕೇಳಿ ಬಂದಿದ್ದವು. ಈ ನಡುವೆ ಬೆಳ್ತಂಗಡಿಯ ಖ್ಯಾತ ಬಿಲ್ಲವ ಸಂಘ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಅಧ್ಯಕ್ಷರಿಗೆ ಅಧಿಕಾರಿ ಸಂಧ್ಯಾ ಸಚಿನ್ ರವರು ಪತ್ರ ಬರೆದು ರಾಜಕೀಯ ದ್ವೇಷದಿಂದ ನನ್ನನ್ನು ವರ್ಗಾಯಿಸಲಾಗುತ್ತಿದೆ ನನಗೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದ್ದರು.
ಆದರೆ, ಅಧಿಕಾರಿಯ ವರ್ಗಾವಣೆಯನ್ನು ಸರ್ಕಾರ ತಡೆಹಿಡಿಯುವ ಮೂಲಕ ಶಾಸಕ ಹರೀಶ್ ಪೂಂಜಾರವರಿಗೆ ತೀವ್ರ ಮುಖಭಂಗವಾಗಿದೆ.