ಬೆಂಗಳೂರಿನಲ್ಲಿ ಡಾ. ಕಫೀಲ್ ಖಾನ್ ಅವರ ಗೋರಖ್ಪುರ್ ಹಾಸ್ಪಿಟಲ್ ಟ್ರಾಜೆಡಿ ಪುಸ್ತಕ ಬಿಡುಗಡೆ

Prasthutha|

ಬೆಂಗಳೂರು: ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಮೆಡಿಕಲ್ ಸರ್ವಿಸ್ ಸೆಂಟರ್ ವತಿಯಿಂದ ಡಾ. ಕಫೀಲ್ ಖಾನ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಸೋಮವಾರ ನಡೆಯಿತು.

- Advertisement -

ಪುಸ್ತಕದ ಕರ್ತೃ ಹಾಗೂ ಜನಪ್ರಿಯ ವೈದ್ಯ ಡಾ. ಕಫೀಲ್ ಖಾನ್ ಅವರೇ ಖುದ್ದಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ,ಆಗಸ್ಟ್ 2017ರಲ್ಲಿ ನಡೆದ ಆ ದುರಂತವನ್ನು ಕಣ್ಣಾರೆ ಕಂಡು, ಅನಾಹುತದ ತೀವ್ರತೆ ತಗ್ಗಿಸಲು ಯತ್ನಿಸಿದಾಗ ಸೇವೆಯಿಂದ ವಜಾಗೊಂಡು, ಎಂಟು ತಿಂಗಳ ಜೈಲುಶಿಕ್ಷೆ ಅನುಭವಿಸಿ, ಪರಮ ತಾತ್ಸಾರ ಮತ್ತು ಕಿರುಕುಳದ ನಡುವೆಯೂ ನ್ಯಾಯಕ್ಕಾಗಿ ನಡೆಸಿದ ನಿರಂತರ ಹೋರಾಟದ ಕುರಿತ ತಮ್ಮ ಅನುಭವಗಾಥೆ “ಗೋರಖ್ಪುರ್ ಹಾಸ್ಪಿಟಲ್ ಟ್ರಾಜೆಡಿ” (ಗೋರಖ್ಪುರ ಆಸ್ಪತ್ರೆ ದುರಂತ) ಪುಸ್ತಕದ ಬಗ್ಗೆಮಾತನಾಡಿದರು.

ಖ್ಯಾತ ಆಹಾರತಜ್ಞ ಮತ್ತು ನೀತಿ ವಿಶ್ಲೇಷಕ ಡಾ. ಕೆ.ಸಿ. ರಘು, ಹಿರಿಯ ಪತ್ರಕರ್ತರಾದ ಎಂ.ಎ. ಸಿರಾಜ್, ಮೆಡಿಕಲ್ ಸರ್ವಿಸ್ ಸೆಂಟರ್ ಪದಾಧಿಕಾರಿಗಳಾದ ಡಾ. ಕೆ.ಎಸ್. ಗಂಗಾಧರ್, ಡಾ. ರಾಜಶೇಖರ್ ಮತ್ತು ಡಾ. ಸುನಿತ್ ಕುಮಾರ್ ಶೆಟ್ಟಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

- Advertisement -

ಡಾ. ಕಫೀಲ್ ಖಾನ್ ಮಾತನಾಡಿ, ಆಗಸ್ಟ್ 10, 2017. ಉತ್ತರ ಪ್ರದೇಶದ ಗೋರಖ್ಪುರದಲ್ಲಿರುವ ಬಾಬಾ ರಾಘವದಾಸ್ ಮೆಡಿಕಲ್ ಕಾಲೇಜಿನ ನೆಹರು ಆಸ್ಪತ್ರೆಯಲ್ಲಿ ದ್ರವರೂಪದ ಆಕ್ಸಿಜನ್ ಸರಬರಾಜು ನಿಂತುಹೋಯಿತು.  ಆನಂತರದ ಎರಡು ದಿನಗಳಲ್ಲಿ ಎಂಭತ್ತಕ್ಕೂ ಹೆಚ್ಚು ರೋಗಿಗಳು – 63 ಮಕ್ಕಳು ಹಾಗೂ 18 ಮಂದಿ ವಯಸ್ಕರು – ಪ್ರಾಣ ಕಳೆದುಕೊಂಡರು. ಈ ಎರಡು ದಿನಗಳಲ್ಲಿ, ಆ ಕಾಲೇಜಿನ ಶಿಶುರೋಗ ವಿಭಾಗದ ಅತ್ಯಂತ ಕಿರಿಯ ಪ್ರಾಧ್ಯಾಪಕರಾಗಿದ್ದ ಡಾ. ಕಫೀಲ್ ಖಾನ್, ಬೇರೆ ಕಡೆಯಿಂದ ಆಕ್ಸಿಜನ್ ಸಿಲಿಂಡರ್ ಏರ್ಪಾಟು ಮಾಡಿ, ರೋಗಿಗಳಿಗೆ ತುರ್ತಾಗಿ ಚಿಕಿತ್ಸೆ ನೀಡಿ, ಸಾವುಗಳ ಸಂಖ್ಯೆಯನ್ನು ಸಾಧ್ಯವಾದ ಮಟ್ಟಿಗೆ ಕಡಿಮೆ ಮಾಡಲು ತಮ್ಮ ಶಕ್ತಿ ಮೀರಿ ಪ್ರಯತ್ನಿಸಿದರು.

ಈ ಸುದ್ದಿ ದೇಶದೆಲ್ಲೆಡೆ ಹಬ್ಬಿದಾಕ್ಷಣ, ಬಿಕ್ಕಟ್ಟಿನ ನಿಯಂತ್ರಣಕ್ಕೆ ಛಲಬಿಡದೆ ಪ್ರಯತ್ನಿಸಿದ ಹಾಗೂ ದೇಶದ ಆರೋಗ್ಯ ವ್ಯವಸ್ಥೆಯ ಸುಧಾರಣೆಯತ್ತ ಎಲ್ಲರ ಗಮನ ಸೆಳೆದ ಡಾ.ಖಾನ್ ಅವರನ್ನು “ಹೀರೋ” ಎಂದು ಕೊಂಡಾಡಲಾಯಿತು. ಆದರೆ ಅದಾಗಿ ಕೆಲವೇ ದಿನಗಳಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಿ, ಭ್ರಷ್ಟಾಚಾರ, ವೈದ್ಯಕೀಯ ನಿರ್ಲಕ್ಷ್ಯದಂತಹ ಗಂಭೀರ ಆರೋಪಗಳನ್ನು ಅವರ ಮೇಲೆ ಹೊರಿಸಿ ಡಾ. ಖಾನ್ ಸೇರಿದಂತೆ ಒಂಭತ್ತು ಮಂದಿಯ ಮೇಲೆ ಎಫ್ಐಆರ್ ದಾಖಲಿಸಲಾಯಿತು. ಆಮೇಲೆ, ಅವರಿಗೆ ಜೈಲುಶಿಕ್ಷೆ ವಿಧಿಸಲಾಗಿತ್ತು. ಈ ಪುಸ್ತಕ, ಆ ಕರಾಳ ರಾತ್ರಿಯ ಕುರಿತ ಡಾ. ಖಾನ್ರವರ ಅನುಭವ-ಕಥನವಾಗಿದೆ ಈ ಕೃತಿ.



Join Whatsapp