ಚೆನ್ನೈ : ಇತ್ತೀಚೆಗೆ ಟ್ವಿಟರ್‌ನಲ್ಲಿ ಅವಹೇಳನಕಾರಿ ವಿಷಯವನ್ನು ಪೋಸ್ಟ್ ಮಾಡಿ ವದಂತಿಗಳನ್ನು ಹರಡಿದ್ದಕ್ಕಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪದಾಧಿಕಾರಿ ವಿನೋಜ್ ಪಿ. ಸೆಲ್ವಂ ವಿರುದ್ಧ ಕೇಂದ್ರ ಅಪರಾಧ ವಿಭಾಗದ ಸೈಬರ್ ಕ್ರೈಂ ವಿಭಾಗವು ಪ್ರಕರಣ ದಾಖಲಿಸಿದೆ.
ಸೆಲ್ವಂ ಅವರು ಪ್ರಸ್ತುತ ತಮಿಳುನಾಡು ಭಾರತೀಯ ಜನತಾ ಯುವ ಮೋರ್ಚಾ (BJYM) ಅಧ್ಯಕ್ಷರಾಗಿದ್ದಾರೆ.
ಕಿಲ್ಪಾಕ್ ನ ಇಳಂಗೋವನ್ ಎಂಬ ವ್ಯಕ್ತಿ ಸೆಲ್ವಂ ವಿರುದ್ಧ ದೂರು ದಾಖಲಿಸಿದ್ದು, ಸೆಲ್ವಂ ಅವರು ಮಾನನಷ್ಟ ವಿಷಯವನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಜನರಲ್ಲಿ ಭಯ ಮತ್ತು ದ್ವೇಷವನ್ನು ಉಂಟುಮಾಡುವಂತಹ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ಈ ಕೃತ್ಯವು ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ಉದ್ದೇಶವನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.
ದೂರಿನ ಆಧಾರದ ಮೇಲೆ ಸೆಲ್ವಂ ವಿರುದ್ಧ ವರದಿಯನ್ನು ದಾಖಲಿಸಲಾಗಿದೆ ಮತ್ತು ಪ್ರಕರಣವನ್ನು ತನಿಖೆಗೆ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ..
ಚೆನ್ನೈ ನಗರ ಪೊಲೀಸ್ ಕಮಿಷನರ್ ಶಂಕರ್ ಜಿವಾಲ್ ಅವರು, “ಸಾರ್ವಜನಿಕ ನೆಮ್ಮದಿಗೆ ವಿರುದ್ಧವಾದ ಮತ್ತು ಧಾರ್ಮಿಕ ದ್ವೇಷವನ್ನು ಉಂಟುಮಾಡುವ ಸಾಮಾಜಿಕ ಮಾಧ್ಯಮ ಪುಟಗಳು ಅಥವಾ ವಾಟ್ಸಾಪ್‌ಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುವ ಅಥವಾ ತಪ್ಪು ಮಾಹಿತಿ ಪ್ರಚಾರಗಳನ್ನು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು”ಎಂದು ಚೆನ್ನೈ ನಗರ ಪೊಲೀಸ್ ಕಮಿಷನರ್ ಶಂಕರ್ ಜಿವಾಲ್ ಎಚ್ಚರಿಸಿದ್ದಾರೆ.