ಮಲಯಾಳಂ ನಟ ದಿಲೀಪ್ ಮನೆ ಮೇಲೆ ಪೊಲೀಸ್ ದಾಳಿ

Prasthutha|

ತಿರುವನಂತಪುರ: 2017 ರಲ್ಲಿ ತನ್ನೊಂದಿಗೆಯೇ ನಾಯಕಿಯಾಗಿ ನಟಿಸಿದ್ದ ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ರೂವಾರಿಯೆಂದು ಬಂಧನಕ್ಕೊಳಗಾಗಿ ಈಗ ಜಾಮೀನಿನಲ್ಲಿರುವ ನಟ ನಟ ದಿಲೀಪ್ ಆ ಪ್ರಕರಣದ ತನಿಖಾ ಅಧಿಕಾರಿಗಳಿಗೆ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಮನೆಯ ಮೇಲೆ ಪೊಲೀಸ್ ದಾಳಿಯಾಗಿದೆ. ಕೇರಳ ಪೊಲೀಸರ ಅಪರಾಧ ವಿಭಾಗದ ತಂಡವು ನಟ ದಿಲೀಪ್ ಮತ್ತು ಅವರ ಸಹೋದರನ ಮನೆಗಳು ಮತ್ತು ಅವರ ಗ್ರ್ಯಾಂಡ್ ಪ್ರೊಡಕ್ಷನ್ ಕಂಪನಿಯ ಕಚೇರಿಯ ಮೇಲೆ ಗುರುವಾರ ದಾಳಿ ನಡೆಸಿದೆ.

- Advertisement -

ಮೂರು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲು ಅಧಿಕಾರಿಗಳ ಮೂರು ತಂಡಗಳನ್ನು ಕಳುಹಿಸಲಾಗಿದೆ ಎಂದು ಅಪರಾಧ ವಿಭಾಗದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ನ್ಯಾಯಾಲಯದ ಆದೇಶ ಮತ್ತು ನಿರ್ದೇಶಕ ಬಾಲಚಂದ್ರ ಕುಮಾರ್ ಅವರು ಅಪರಾಧ ವಿಭಾಗಕ್ಕೆ ನೀಡಿದ ಹೇಳಿಕೆಯ ಆಧಾರದ ಮೇಲೆ ದಾಳಿ ನಡೆಸಲಾಗಿದೆ.

- Advertisement -

ಕ್ರೈಂ ಬ್ರಾಂಚ್ ಗೆ ಹಾಜರಾದ ಬಳಿಕ ಮಾಧ್ಯಮದವರನ್ನು ಭೇಟಿ ಮಾಡಿದ ಬಾಲಚಂದ್ರ ಕುಮಾರ್, ತನಿಖಾಧಿಕಾರಿಗಳ ಮೇಲೆ ದಾಳಿ ನಡೆಸುವ ಸಂಚಿನ ಕುರಿತು ಹಲವು ಕಡೆ ಚರ್ಚೆ ನಡೆದಿದೆ ಎಂದು ಹೇಳಿದ್ದರು

ನಟಿಯ ಮೇಲಿನ ಹಲ್ಲೆ ಪ್ರಕರಣದಲ್ಲಿ ದಿಲೀಪ್ ವಿರುದ್ಧ ಇತ್ತೀಚೆಗೆ ಮಾಧ್ಯಮಗಳ ಮೂಲಕ ಅಚ್ಚರಿಗೊಳಿಸುವ ಸಂಗತಿಗಳನ್ನು ಕುಮಾರ್ ಬಹಿರಂಗಪಡಿಸಿದ್ದರು. ಸಾಕ್ಷಿಗಳ ಮೇಲೆ ದಿಲೀಪ್ ಪ್ರಭಾವ ಬೀರಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಡಿಜಿಟಲ್ ಸೇರಿದಂತೆ ಹಲವು ಸಾಕ್ಷ್ಯಗಳಿವೆ ಎಂದು ಅವರು ಹೇಳಿದ್ದರು.

ಇತ್ತೀಚೆಗೆ ಟಿವಿ ವಾಹಿನಿಯೊಂದು ಬಿಡುಗಡೆ ಮಾಡಿದ ದಿಲೀಪ್ ಅವರ ಆಡಿಯೋ ಕ್ಲಿಪ್ ಅನ್ನು ಆಧರಿಸಿ ತನಿಖಾಧಿಕಾರಿ ನೀಡಿದ ದೂರಿನ ಮೇರೆಗೆ ಅಪರಾಧ ವಿಭಾಗವು ಹೊಸ ಪ್ರಕರಣವನ್ನು ದಾಖಲಿಸಿದ್ದು, ಇದರಲ್ಲಿ ದಿಲೀಪ್ ಅಧಿಕಾರಿಗಳ ಮೇಲೆ ದಾಳಿ ಮಾಡಲು ಸಂಚು ನಡೆಸುತ್ತಿರುವುದು ಬಹಿರಂಗವಾಗಿತ್ತು.



Join Whatsapp