ಕಾರ್ಪೊರೇಟ್ ಕಂಪೆನಿಗಳ ಲಾಭಕ್ಕಾಗಿ ಲಾಕ್‍ಡೌನ್, ಕರ್ಫ್ಯೂ ಹೇರಿಕೆ :ಎಐಟಿಯುಸಿ ಆರೋಪ

Prasthutha|

ಮಂಗಳೂರು : ನಮ್ಮನ್ನಾಳುತ್ತಿರುವ ಸರಕಾರಗಳ ಧಣಿಗಳಾಗಿರುವ ಕಾರ್ಪೊರೇಟ್ ಸಂಸ್ಥೆಗಳ ಲಾಭಕ್ಕೋಸ್ಕರ ಇಂದು ಸರಕಾರಗಳು ಕೊರೊನಾ ಹೆಸರಿನಲ್ಲಿ ಜನರನ್ನು ನಿಯಂತ್ರಿಸಲು ಹೊರಟಿವೆ. ಕಳೆದ ಎರಡು ವರ್ಷಗಳಲ್ಲಿ ವೈದ್ಯಕೀಯ ಮತ್ತಿತರ ಕ್ಷೇತ್ರದಲ್ಲಿ ಬಂಡವಾಳ ಹೂಡಿರುವ ಕಾರ್ಪೊರೇಟ್ ಸಂಸ್ಥೆಗಳ ಲಾಭ ಹೆಚ್ಚಾಗಿದೆ. ಮಾಸ್ಕ್, ಸ್ಯಾನಿಟೈಸರ್, ವ್ಯಾಕ್ಷಿನೇಶನ್‍ಗಳನ್ನು ಖಡ್ಡಾಯ ಮಾಡಿ ಜನರನ್ನು ಹೆದರಿಸಿ, ನಿಯಂತ್ರಿಸಲಾಗುತ್ತಿದೆ. ಇಷ್ಟು ಸಾಲದೆಂಬಂತೆ ಲಾಕ್‍ಡೌನ್, ಕಫ್ರ್ಯು ಹೇರಿ ಜನರನ್ನು ಬಾಯಿ ಮುಚ್ಚಿಸಲಾಗಿದೆ. ಸರಕಾರದ ಈ ಬಂಡವಾಳಶಾಹಿಪರ, ಅವೈಜಾÐನಿಕ ಅನೀತಿಗಳನ್ನು ಇನ್ನು ಮುಂದೆ ಜನಸಾಮಾನ್ಯ ಕಾರ್ಮಿಕ ವರ್ಗ ಸಹಿಸಲು ಸಾಧ್ಯವಿಲ್ಲ ಎಂದು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಸರಕಾರಕ್ಕೆ ಎಚ್ಚರಿಕೆ ನೀಡಿದೆ.
ಕರ್ನಾಟಕ ರಾಜ್ಯ ಸರಕಾರ ಘೋಷಿಸಿರುವ ವೀಕೆಂಡ್ ಕಫ್ರ್ಯುವನ್ನು ಕೂಡಲೇ ಹಿಂತೆಗೆಯಬೇಕೆಂದು ಒತ್ತಾಯಿಸಿ ಎಐಟಿಯುಸಿ ದ.ಕ ಮತ್ತು ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಂದು ಮಂಗಳೂರಿನ ಮಿನಿವಿಧಾನಸೌಧದ ಎದುರು ನಡೆದ ಪ್ರತಿಭಟನಾ ಪ್ರದರ್ಶನವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ವಿ. ಸೀತಾರಾಂ ಬೇರಿಂಜ ಸರಕಾರಗಳ ತಪ್ಪು ಆರ್ಥಿಕ ನೀತಿಗಳಿಂದಾಗಿ ಕುಸಿದಿರುವ ದೇಶದ ಆರ್ಥಿಕತೆ ಕೊರೊನಾ ಹೆಸರಿನಲ್ಲಿ ಹೇರಿದ ಲಾಕ್‍ಡೌನ್ ನಿಂದಾಗಿ ನೆಲೆ ಕಳೆದುಕೊಂಡಿತು. ಲಕ್ಷಾಂತರ ಕಾರ್ಮಿಕರು ಉದ್ಯೋಗ ಕಳೆದುಕೊಂಡರು. ದಕ್ಷಿಣ ಏಶಿಯಾದಲ್ಲೇ ಶೇ.8 ರಷ್ಟು ಉದ್ಯೋಗ ಭಾರತದಲ್ಲೇ ಕುಸಿತವಾಯಿತು. ಸುಮಾರು 40 ಕೋಟಿ ಜನರು ಬಡತನಕ್ಕೆ ತಳ್ಳಲ್ಪಟ್ಟರು. ಹದಿನೈದು ಉದ್ಯೋಗಕ್ಕಾಗಿ ಸುಮಾರು 15000 ನಿರುದ್ಯೋಗಿಗಳು ಅರ್ಜಿ ಸಲ್ಲಿಸುವ ಪರಿಸ್ಥಿತಿ ಉಂಟಾಯಿತು. ಯಾವುದೇ ಕೆಲಸವನ್ನು ಕನಿಷ್ಠ ಸಂಬಳಕ್ಕೆ ಒಪ್ಪುವ ಅನಿವಾರ್ಯತೆಯನ್ನು ಸರಕಾರಗಳು ಸೃಷ್ಠಿಸುತ್ತಿದೆ. ಉದ್ಯೋಗದಲ್ಲಿರುವ ಶೇ.45 ನೌಕರರ ತಿಂಗಳ ಸರಾಸರಿ ಸಂಬಳ ಕೇವಲ ರೂ. 9000 ಕ್ಕೆ ಕುಸಿದಿದೆ. ಈ ಪರಿಸ್ಥಿತಿಗಳನ್ನು ಸರಕಾರಗಳೇ ಹುಟ್ಟಿ ಹಾಕಿದ್ದು ತನ್ನ ಚುನಾವಣಾ ನಿಧಿ ಪ್ರಾಯೋಜಕರಾದ ಕಾರ್ಪೊರೇಟ್ ಧಣಿಗಳಿಗಾಗಿದೆ ಎಂದು ಆರೋಪಿಸಿದರು. ಮಕ್ಕಳು ಓದುವ ಶಾಲೆಗಳನ್ನು ಮುಚ್ಚಿ ಅವರ ಮಾನಸಿಕ ಹಾಗೂ ಬೌದ್ಧಿಕ ವಿಚಾರಗಳ ಬೆಳವಣಿಗೆಯನ್ನು ಕುಂದಿಸಲಾಗಿದೆ. ಕೊರೋನ ವಾಸಿಯಾಗುವ ಗ್ಯಾರಂಟಿಯಿಲ್ಲದ ವ್ಯಾಕ್ಷಿನ್‍ಗಳನ್ನು ಇದೀಗ ಮಕ್ಕಳ ಮೇಲೂ ಪ್ರಯೋಗಿಸಲಾಗುತ್ತಿದೆ. ಇಂತಂಹ ಅಸಂಬದ್ದ, ಕೊಲೆಗಡುಕ ಸರಕಾರದ ಪ್ರತಿನಿಧಿಗಳು ಕೂಡಲೇ ರಾಜೀನಾಮೆ ನೀಡಬೇಕೆಂದು ಅವರು ಒತ್ತಾಯಿಸಿದರು.
ಎಐಟಿಯುಸಿ ರಾಜ್ಯ ಮಂಡಳಿ ಸದಸ್ಯ ಬಿ. ಶೇಖರ್ ಮಾತನಾಡುತ್ತಾ ಕೊರೋನಾ ಸಂಕಷ್ಟದಲ್ಲಿ ಜನರು ತೊಳಲಾಡುತ್ತಿದ್ದರೂ ಅಡುಗೆ ಅನಿಲ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಏರಿಸಲಾಯಿತು. ಶಾಲಾ ಕಾಲೇಜುಗಳನ್ನು ಬಂದ್ ಮಾಡಿ ಮಕ್ಕಳಿಗೆ ವಿದ್ಯಾಭ್ಯಾಸ ನಿರಾಕರಿಸಲಾಯಿತು. ಅಸಂಘಟಿತ ಕಾರ್ಮಿಕರಿಗೆ ಧನಸಹಾಯ ನೀಡುತ್ತೇವೆಂದು ಹೇಳಿ ಅರ್ಜಿ ಹಾಕಿಸಿದರೂ ಅರ್ಧದಷ್ಟು ಕಾರ್ಮಿಕರಿಗೆ ಒಂದು ಪೈಸೆಯನ್ನೂ ನೀಡಿಲ್ಲ. ಸರಕಾರಗಳು ತನ್ನ ವೈಫಲ್ಯಗಳನ್ನು ಮರೆಮಾಚಲು ಕಫ್ರ್ಯು, ಲಾಕ್‍ಡೌನ್ ಹೇರುವುದನ್ನು ಖಂಡಿಸಿದರು.
ಮೊದಲಿಗೆ ಎಐಟಿಯುಸಿ ಜಿಲ್ಲಾ ಜೊತೆ ಕಾರ್ಯದರ್ಶಿ ಸುರೇಶ್ ಕುಮರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ. ಶೇಖರ್ ಮಾತನಾಡಿ ವಂದಿಸಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್, ಜಿಲ್ಲಾ ಅಧ್ಯಕ್ಷ ಹೆಚ್.ವಿ ರಾವ್, ಕೋಶಾಧಿಕಾರಿ ಎ.ಪಿ ರಾವ್, ಜೊತೆ ಕಾರ್ಯದರ್ಶಿ ಎಂ. ಕರುಣಾಕರ್, ಸುಲೋಚನಾ ಹರೀಶ್, ಸಂಜೀವಿ ಹಳೆಯಂಗಡಿ, ವಿಶ್ವನಾಥ ಬ್ರಹ್ಮರಕೋಟ್ಲು, ನಾಗೇಶ್ ಕಲ್ಲೂರು, ಸರೋಜಿನಿ ಕೂರಿಯಾಳ, ಎಂ. ಬಿ. ಭಾಸ್ಕರ್, ರೂಪಾ ಸಿದ್ದಾರ್ಥನಗರ, ಕೃಷ್ಣಪ್ಪ ವಾಮಂಜೂರು, ಡಿ. ಭುಜಂಗ, ಒ. ಕೃಷ್ಣ ವಿಟ್ಲ, ಮುಂತಾದವರು ನೇತೃತ್ವ ನೀಡಿದರು.



Join Whatsapp